ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರ್ಯಾಗಿಂಗ್: ಕುದಿಯುವ ನೀರಿಗೆ ತಲೆ ಅದ್ದಿದರು

Lingaraj Badiger
Updated On : 22 Jan 2013, 10:46 am

ತುಮಕೂರು: ರ್ಯಾಗಿಂಗ್ ನೆಪದಲ್ಲಿ ಕೇರಳ ಮೂಲದ ವಿದ್ಯಾರ್ಥಿಯೊಬ್ಬನನ್ನು ಕೊತ ಕೊತ ಕುದಿಯುತ್ತಿದ್ದ ಬಿಸಿ ನೀರಿಗೆ ಅದ್ದಿದ ಘಟನೆ ತುಮಕೂರಿನ ಶ್ರೀ ಸಿದ್ಧಾರ್ಥ ಇನ್ಸ್‌ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜ್‌ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕುದಿಯುವ ನೀರಿನಲ್ಲಿ ತಲೆ ಅದ್ದಿದ ಪರಿಣಾಮ ವಿದ್ಯಾರ್ಥಿ ಮಹಮದ್ ರಫಿಯ ಕುತ್ತಿಗೆ ಮತ್ತು ತಲೆಯಲ್ಲಿ ಶೇ.35ರಷ್ಟು ಸುಟ್ಟಗಾಯಗಳಾಗಿವೆ. ಮಹಮದ್ ರಫಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ಬಿಬಿಎಂ ಓದುತ್ತಿದ್ದರು. ರಫಿ ಮೂಲತ ಕೇರಳದ ವೈನಾಡ್ ಜಿಲ್ಲೆಯ ವೆಲ್ಲಿಮುಂಡದವರು. ಇದೀಗ ವೆಲ್ಲಿಮುಂಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೇಗಾಯ್ತು?: ಕಳೆದ ಶನಿವಾರ ಮಧ್ಯಾಹ್ನ ಮಹಮದ್ ರಫಿ ತುಮಕೂರು ನಗರದ ಅಮರಜ್ಯೋತಿ ನಗರದಲ್ಲಿ ತನ್ನ ರೂಮಿನಲ್ಲಿ ಇದ್ದ. ಆ ಸಮಯದಲ್ಲಿ ಕೇರಳದವರೇ ಆದ 6ನೇ ಸೆಮಿಸ್ಟರ್ ವಿದ್ಯಾರ್ಥಿ ಅಖಿಲೇಶ್, ರೆಜಿನ್‌ಲಾಲ್ ಮುಂತಾದವರು ರ್ಯಾಗಿಂಗ್ ನಡೆಸಿದ್ದಾರೆ. ಅಲ್ಲದೇ ರಫಿಯ ಮುಖವನ್ನು ಕೊತ ಕೊತ ಕುದಿಯುತ್ತಿದ್ದ ನೀರಿಗೆ ಅದ್ದಿದ್ದಾರೆ. ತಕ್ಷಣ ಆತನನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ರಫಿ ಸೀದಾ ತಮ್ಮ ಹುಟ್ಟೂರಿಗೆ ಹೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  
ಮಹಮದ್ ರಫಿ ಮೇಲೆ ರ್ಯಾಗಿಂಗ್ ನಡೆಸಿದ ಅಖಿಲೇಶ್ ಎಂಬುವನೇ ರಫಿಯನ್ನು ಈ ಕಾಲೇಜಿಗೆ ಸೇರಿಸಿದ್ದು ಎನ್ನಲಾಗಿದೆ. ಕೇರಳ ಮೂಲದ ಅಖಿಲೇಶ್ ಅವರು ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಏಜೆನ್ಸಿಯೊಂದನ್ನು ಆರಂಭಿಸಿದ್ದ. ಇದರ ಉದ್ಘಾಟನಾ ಸಮಾರಂಭಕ್ಕೆ ರಫಿಯನ್ನು ಆಹ್ವಾನಿಸಿದ್ದನಂತೆ. ಆದರೆ ಆತ ಆ ಸಮಾರಂಭಕ್ಕೆ ಹೋಗದೇ ಇದ್ದುದ್ದರಿಂದ ಈ ರೀತಿ ಕೃತ್ಯ ನಡೆಸಿದ್ದಾರೆ ಎಂಬುದು ಕಾಲೇಜಿನ ಮೂಲಗಳ ಹೇಳಿಕೆಯಾಗಿದೆ.
ಸದ್ಯ ರಫಿ ಈಗ ಕೇರಳ ಪೊಲೀಸರಿಗೆ ರ್ಯಾಗಿಂಗ್ ಸಂಬಂಧ ದೂರು ನೀಡಿದ್ದಾರೆ. ಈಗಾಗಲೇ ಕೇರಳ ಪೊಲೀಸರು ತುಮಕೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಒಂದು ವೇಳೆ ಕೇರಳದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ಇಲ್ಲಿಗೆ ವರ್ಗಾಯಿಸಿದರೆ ತನಿಖೆ ನಡೆಸಲಾಗುವುದು ಎನ್ನುತ್ತಾರೆ ತುಮಕೂರು ಪೊಲೀಸರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement