ಕಸ ವಿಲೇವಾರಿ ಘಟಕ ವಿರೋಧಿಸಿ ಸಹಿ ಸಂಗ್ರಹ
ತುಮಕೂರು: ಕೊರಟಗೆರೆ ತಾಲೂಕಿನ ತೊಗರಿಘಟ್ಟದಲ್ಲಿ ಬೆಂಗಳೂರಿನ ಬಿ.ಬಿ.ಎಂ.ಪಿ ಕಸವಿಲೇವಾರಿ ಘಟಕ ಸ್ಥಾಪನೆ ನಿರ್ಧಾರವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಡಿ.ವೈ.ಎಫ್.ಐ ಮತ್ತು ಕೆ.ಪಿ.ಆರ್.ಎಸ್. ತಾಲೂಕು ಸಮಿತಿಗಳು ಸಹಿ ಸಂಗ್ರಹ ಚಳವಳಿಗೆ ಮುಂದಾಗಿವೆ.
ತೊಗರಿಘಟ್ಟ ಸೇರಿದಂತೆ ಸುತ್ತಲಿನ 40 ಹಳ್ಳಿಗಳಲ್ಲಿ ಸಹಿ ಸಂಗ್ರಹ ಚಳುವಳಿ ನಡೆಸುತ್ತಿದ್ದು ಈಗಾಗಲೇ 5 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ. ಫೆಬ್ರವರಿ 5,6 ರಂದು ತೊಗರಿಘಟ್ಟದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದರು.
ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ, ಸರಿಯಾಗಿ ಮಳೆಯಾಗದೆ ಬರದಿಂದ ಬಳಲಿರುವ ರೈತರಿಗೆ ಸರ್ಕಾರದ ಜಮೀನು ಒತ್ತುವರಿ ಬರಸಿಡಿಲಿನಂತೆ ಬಡಿದಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಎಂದು ಬೊಬ್ಬೆಯೊಡೆಯುವ ಸರ್ಕಾರಗಳು, ಜನಪ್ರತಿನಿಧಿಗಳು ತಮ್ಮ ಜೀವನದ ನಿರ್ವಹಣೆಗಾಗಿ ತುಂಡು ಭೂಮಿಯನ್ನು ಹೊಂದಿ ಅಲ್ಪಸ್ವಲ್ಪ ಬೆಳೆಗಳನ್ನು ಬೆಳೆದು ಜೀವನ ಸಾಗಿಸುವ ರೈತರ ಬದುಕನ್ನು ಕಸಿದುಕೊಳ್ಳುವ ಸರ್ಕಾರದ ನೀತಿಗಳು ವಾಪಸ್ ಆಗಬೇಕು ಎಂದು ಡಿ.ವೈ.ಎಫ್., ಕೆ.ಪಿ.ಆರ್.ಎಸ್ ಒತ್ತಾಯಿಸಿವೆ.
ತೀವ್ರ ತೊಂದರೆ: ಬೆಂಗಳೂರು ಮಹಾನಗರ ಪಾಲಿಕೆ ಬಿ.ಬಿ.ಎಂ.ಪಿ ತೊಗರಿಘಟ್ಟದ ಬಳಿ 600 ಎಕರೆ ಪ್ರದೇಶದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಆದಿತಿಮ್ಮಪ್ಪನ ದೇವಸ್ಥಾನ, ಅರಣ್ಯ ಪ್ರದೇಶ, ಜಯಮಂಗಲಿ ನದಿ ಹರಿಯುವುದರಿಂದ ಈ ಸ್ಥಳದಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಯಿಂದ ಅಂತರ್ ಜಲ ಕಲುಷಿತಗೊಂಡು ಸುತ್ತಲಿನ ಗ್ರಾಮಗಳ ಜನರು ಹಲವಾರು ರೋಗರುಜಿನಗಳಿಂದ ಬಳಲಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿವೆ.
ಕೈಬಿಡಬೇಕು: ಸಾಲದೆಂಬತೆ ಸರ್ಕಾರದ ಸಂಸ್ಥೆಯೇ ಆಗಿರುವ ಪರಿಸರ ಮತ್ತು ವಾಯುಮಾಲಿನ್ಯ ಇಲಾಖೆ ಸಹ ಈ ಸ್ಥಳದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಬಾರದು ಎಂದು ವರದಿ ನೀಡಿದ್ದರೂ ಸಹ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಡಿ.ವೈ.ಎಫ್.ಐ ಮತ್ತು ಕೆಪಿಆರ್‌ಎಸ್ ಸರ್ಕಾರವನ್ನು ಒತ್ತಾಯಿಸಿವೆ.
ರೈತರ ಬದುಕನ್ನು ಗಮದಲ್ಲಿಟ್ಟುಕೊಂಡು ಸರ್ಕಾರ ಈ ಕೂಡಲೇ ಈ ನೀತಿಯನ್ನು ಕೈಬಿಡಬೇಕು ಎಂದು ಡಿ.ವೈ.ಎಫ್.ಐ ಮತ್ತು ಕೆ.ಪಿ.ಆರ್.ಎಸ್ ಒತ್ತಾಯಿಸುತ್ತವೆ. 10 ಸಾವಿರ ಸಹಿ ಸಂಗ್ರಹದ ಗುರಿಯನ್ನು ಹೊಂದಿರುವ ಈ ಚಳುವಳಿಯಲ್ಲಿ ಡಿ.ವೈ.ಎಫ್.ಐನ ತಾಲೂಕು ಅಧ್ಯಕ್ಷ, ಎಂ.ರಂಗನಾಥ್, ತಾಲೂಕು ಕಾರ್ಯದರ್ಶಿ, ಎಂ.ಜಿ. ಮಂಜುನಾಥ್, ಖಜಾಂಚಿ, ಎಂ.ಆರ್. ನಾಗರಾಜು, ಜಿಲ್ಲಾ ಉಪಾಧ್ಯಕ್ಷ, ಮಂಜುನಾಥ್, ರಘುಪ್ರಸಾದ್, ದಯಾನಂದ್ ಸುರೇಂದ್ರನಾಥ್, ರವಿಕುಮಾರ್ ಎಂ.ಎಂ. ಕೆ.ಪಿ.ಆರ್.ಎಸ್. ನ ಜಿಲ್ಲಾ ಸಹಸಂಚಾಲಕ ನೌಷಾದ್ ಸೆಹಗನ್, ತಾಲೂಕು ಸಂಚಾಲಕ ಸುರೇಶ್ ಸಹಿ ಸಂಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.