ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರಿಗೂ ಒಂದು ರಂಗಾಯಣ ಬೇಕು

Parashurama
Updated On : 25 Jan 2013, 9:46 am

ತುಮಕೂರು: ಮೈಸೂರು, ಧಾರವಾಡ ಹಾಗೂ ಶಿವಮೊಗ್ಗದಲ್ಲಿರುವಂತೆ ತುಮಕೂರಿಗೂ ಒಂದು ರಂಗಾಯಣ ಬೇಕು ಎಂದು ಪತ್ರಕರ್ತ  ಹಾಗೂ ರಂಗ ಸಂಘಟಕ ಉಗಮ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಅವರು ತುಮಕೂರು ಜಿಲ್ಲಾ ಉತ್ಸವದ ಅಂಗವಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕವಿರುವ ತಾಲೀಮು ಕೊಠಡಿಯಲ್ಲಿ ಆಯೋಜಿಸಲಾಗಿದ್ದ ರಂಗಭೂಮಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಗಾಯಣದ ಬೈಲಾ ಪ್ರಕಾರ ರಾಜ್ಯದ 6 ಕಡೆ ರಂಗಾಯಣ ಕೇಂದ್ರ ತೆರೆಯಲು ಅವಕಾಶವಿದೆ. ಈಗಾಗಲೇ ಮೈಸೂರು, ಧಾರವಾಡ ಹಾಗೂ ಶಿವಮೊಗ್ಗದಲ್ಲಿ ರಂಗಾಯಣ ಇದೆ. ಬೆಂಗಳೂರಿನಲ್ಲೂ ರಂಗಾಯಣ ತೆರೆಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕಚೇರಿ ಇದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ರಂಗಾಯಣ ಆರಂಭಿಸುವಂತೆ ಸಲಹೆ ನೀಡಿದರು.
ಆಧುನಿಕ ರಂಗಭೂಮಿಗೆ ಚಾಲನೆ ಸಿಕ್ಕಿದ್ದೆ ಗುಬ್ಬಿ ಕಂಪನಿಯಿಂದ ಎಂದ ಅವರು ಈಗ ಪೌರಾಣಿಕ ರಂಗಭೂಮಿಯ ದುನಿಯಾ ತುಮಕೂರಿನಲ್ಲಿ ಆರಂಭವಾಗಿದೆ ಎಂದರು. ತುಮಕೂರಿನಲ್ಲಿ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಬಿಟ್ಟರೆ ಮತ್ತೊಂದು ಸುಸಜ್ಜಿತ ರಂಗಮಂದಿರವಿಲ್ಲ. ಅಂಬೇಡ್ಕರ್ ಭವನ ದುರಸ್ಥಿಯಾಗಬೇಕಾಗಿದೆ. ಇನ್ನು ಬಾಲಭವನ ಕಟ್ಟಡ ನೋಡಲು ಚೆಂದ. ಆದರೆ ಅಲ್ಲಿ  ಎಕೋ  ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿರುವ ಈ ಎರಡು ಭವನವನ್ನು ಈ ಕೂಡಲೇ ದುರಸ್ಥಿಗೊಳಿಸಬೇಕೆಂದು ಸಲಹೆ ನೀಡಿದರು.
ಪ್ರೇಕ್ಷಕರ ಕೊರತೆ: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಮಾತನಾಡಿ ರಂಗಭೂಮಿಗೆ ಇಂದು ಪ್ರೇಕ್ಷಕರ ಕೊರತೆಯಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಪ್ರೇಕ್ಷಕರು ರಂಗಭೂಮಿ ಕಡೆ ಕರೆ ತರುವ ಕೆಲಸ ಮಾಡಬೇಕಾಗಿದೆ ಎಂದರು. ಪ್ರಯೋಗಾತ್ಮಕ ರಂಗಭೂಮಿಗೆ ಜನರ ಕೊರತೆ ಇದೆ. ಆದರೆ ಸರ್ಕಾರದ ಬೆಂಬಲವಿದೆ. ಆದರೆ ಪೌರಾಣಿಕ ರಂಗಭೂಮಿಯಲ್ಲಿ ಪ್ರೇಕ್ಷಕರಿದ್ದಾರೆ. ಆದರೆ ಸರ್ಕಾರದ ನೆರವು ಸಿಗುತ್ತಿಲ್ಲ. ಹೀಗಾಗಿ ಪೌರಾಣಿಕ ರಂಗಭೂಮಿಯನ್ನು ಬೆಳೆಸಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ಡಾ. ಡಿ.ಎನ್. ಯೋಗೀಶ್ ಅವರು ರಂಗಭೂಮಿ ಒಂದು ರೀತಿಯಲ್ಲಿ ಜೀವಂತ ಕಲಾ ಮಾಧ್ಯಮ. ದೇವಸ್ಥಾನ ಪ್ರಾಂಗಣದಲ್ಲಿ ಆರಂಭವಾಗುತ್ತಿದ್ದ ರಂಗಭೂಮಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಭವಭೂತಿಯಿಂದ ಹಿಡಿದು ಹೊಸ ಹೊಸ ಲೇಖಕರವರೆಗೆ ರಂಗಭೂಮಿ ಹರವು ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಸಾಂಪ್ರದಾಯಿಕ ರಂಗಭೂಮಿ ಮತ್ತು ಆಧುನಿಕ ರಂಗಭೂಮಿ ಮುಖಾಮುಖಿ ಕುರಿತು ಎಚ್.ಕೆ. ನರಸಿಂಹಮೂರ್ತಿ, ಪ್ರಬಂಧ ಮಂಡಿಸಿದರು. ಅಧ್ಯಾಪಕ ಕೃಷ್ಣಪ್ಪ ನಿರೂಪಿಸಿದರು. ನಾಗರಾಜಾಚಾರ್ ರಂಗಗೀತೆ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments