ನೇತ್ರಾವತಿ ನದಿ ನೀರು ತಿರುವು ಯೋಜನೆಗೆ ಶೀಘ್ರ ಶಂಕು
ಮಧುಗಿರಿ: ರಾಜ್ಯದ ಬಯಲು ಸೀಮೆ ಪ್ರದೇಶದ ಜನತೆಗೆ ನೇತ್ರಾವತಿ ನದಿ ನೀರು ತಿರುವು ಯೋಜನೆ ಕಾಮಗಾರಿಗೆ ಅತಿ ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಭರವಸೆ ನೀಡಿದರು.
ಗುರುವಾರ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ಯೋಜನೆಯಡಿ ಮುಚ್ಚು ಹರಾಜು ಮಾರುಕಟ್ಟೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮುಚ್ಚು ಹರಾಜು ಮಾರುಕಟ್ಟೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಬಯಲು ಸೀಮೆ ಜನರ ಬಹು ದಿನಗಳ ಬೇಡಿಕೆಯಾದ ನೇತ್ರಾವತಿ ನದಿ ತಿರುವು ಯೋಜನೆ ಖಚಿತ ಎಂದರು.
ಪ್ರಸ್ತಾವನೆ: ಮಧುಗಿರಿ-ಆಂಧ್ರದ ಹಿಂದುಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಾಲ್ಕೂವರೆ ಕೋಟಿ ರು. ವೆಚ್ಚದ ಅಂದಾಜು ಪಟ್ಟಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿಗಿದ್ದು ಕೊಡಿಗೇನಹಳ್ಳಿ ಹೋಬಳಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಗಣಿಗಾರಿಕೆ ತಡೆ ಹಾಗೂ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದ ಬಸವರಾಜು ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗುಡಿ ಕೈಗಾರಿಕೆ ಸ್ಥಾಪನೆಗೆ ರೈತರು ಭೂನಿ ನೀಡಿದರೆ ಕೇಂದ್ರ ಸರ್ಕಾರದಿಂದ 10 ಕೋಟಿ ರು.ವೆಚ್ಚದಲ್ಲಿ ಕೈಗಾರಿಕೆ ಪ್ರಾರಂಭಿಸಿ ಗ್ರಾಮೀಣ ಭಾಗದ 1 ಸಾವಿರ ಜನರಿಗೆ ಉದ್ಯೋಗ ನೀಡಿ ಸಾಮಾಜಿಕವಾಗಿ ಸದೃಢಗೊಳಿಸಲಾಗುವುದು ಎಂದರು.
ಗೋಶಾಲೆ: ಮಧುಗಿರಿ ತಾಲೂಕಿನಲ್ಲಿ ಬರಗಾರಲ ಬೆಂಬಿಡದೇ ಕಾಡುತ್ತಿದ್ದು, ಜನ-ಜಾನುವಾರುಗಳ ರಕ್ಷಣೆಗೆ ಗೋಶಾಲೆ ಪ್ರಾರಂಭಿಸುವಂತೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸಮೂರ್ತಿ ತಾಲೂಕಿನ
ಬ್ಯಾಲ್ಯ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ 2 ಎಕರೆ ಜಮೀನಿನಲ್ಲಿ ಉಪಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಹಾಗೂ ಮಧುಗಿರಿ ಉಪವಿಭಾಗದ ರೈತರ ಬೆಳೆಗಳ ಸಂರಕ್ಷಣೆಗೆ ಶಿಥೀಲಿಕರಣ ವ್ಯವಸ್ಥೆ ಹಾಗೂ ಕುರಿ, ಮೇಕೆ ಜಾನುವಾರುಗಳ ಸಂತೆ ನಡೆಯಲು ಸರ್ಕಾರ ವ್ಯವಸ್ಥೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಚೆಕ್ ವಿತರಣೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಜಿ.ಶಂಕರನಾರಾಯಣ ರೈತ ಸಂಜೀವಿನಿ ಯೋಜನೆ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಜಿ.ಪಂ.ಸದಸ್ಯೆ ಶಾಂತಲಾ ರಾಜಣ್ಣ, ಎಪಿಎಂಸಿ ಉಪಾಧ್ಯಕ್ಷೆ ಕಾಮಾಕ್ಷಮ್ಮ ಗೋವಿಂದಪ್ಪ, ಹೆಚ್ಚುವರಿ ನಿರ್ದೇಶಕ ಕಾಮರಾಜು, ರಾಜ್ಯ ಕೃಷಿ ಮಾರಾಟ ಮಂಡಳಿ ಉಪಾಧ್ಯಕ್ಷ ವೀರೇಂದ್ರ ಪ್ರಸಾದ್, ನಿದೇಶಕ ಪಿ.ಸಿ.ಕೃಷ್ಣಾರೆಡ್ಡಿ, ವಿಜಯ್ಕುಮಾರ್, ಲಿಂಗಪ್ಪ, ಸಣ್ಣಮಲ್ಲಪ್ಪ, ಶ್ರೀನಾಥ್, ತಿಮ್ಮೇಗೌಡ, ಲಕ್ಷ್ಮೀ, ಸುಶೀಲಮ್ಮ ಇನ್ನು ಅನೇಕರು ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ನಾಗೇಂದ್ರ ಕುಮಾರ್ ಸ್ವಾಗತಿಸಿ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.