ಮೌಲ್ಯಯುತ, ಸಚ್ಚಾರಿತ್ರ್ಯ ರಾಜಕಾರಣಿಗಳಿಗೇ ಮತ ನೀಡಿ
ಕುಣಿಗಲ್: ಎಲ್ಲಿಯವರೆಗೂ ಮತದಾರರು ಜಾಗೃತರಾಗಿ ತತ್ವ, ಮೌಲ್ಯ, ಸಿದ್ಧಾಂತಗಳ ತಳಹದಿಯ ಮೇಲೆ ಸಚ್ಚಾರಿತ್ರ ರಾಜಕಾರಣವನ್ನು ಹೊಂದಿದಂತಹ ಜನಪ್ರತಿನಿಧಿಗಳ ಆಯ್ಕೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಮೌಲ್ಯಯುತ ಅಭಿವೃದ್ಧಿಪರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಮುಖಂಡ, ಪುರಸಭಾ ಸದಸ್ಯ ಬಲರಾಮ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಇಂದಿಗೂ ಉಳಿದುಕೊಂಡು ಬರುತ್ತಿರುವುದು ಮತದಾನದತಂಹ ಮಹಾನ್ ಪ್ರಕ್ರಿಯೆಯ ಮೇಲೆ. ಆದರೆ, ದಿನಕಳೆದಂತೆ ಮತದಾರರು ತಾವು ನೀಡುವ ಮತದಾನದ ಬಗ್ಗೆ ಸೂಕ್ತ ಅರಿವಿಲ್ಲದೆ, ಭ್ರಷ್ಟ ರಾಜಕಾರಣಿಗಳು ಸಂದರ್ಭಕ್ಕನುಗುಣವಾಗಿ ರೂಪಿಸುವ ಕೆಟ್ಟವ್ಯವಸ್ಥೆಯ ಆಸೆ, ಆಮಿಶಕ್ಕೆ ಬಹಳಷ್ಟು ಮತದಾರರು ಒಳಗಾಗಿ, ಯಾವುದೇ ಸಿದ್ಧಾಂತಗಳ ಮೌಲ್ಯವಿಲ್ಲದಂತಹವರು ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವು ಸಮಸ್ಯೆ ಕಾಡುತ್ತಿದ್ದು ಇನ್ನಾದರೂ ಯುವ ಮತದಾರರು ಜಾಗೃತರಾಗಿ ಮೌಲ್ಯಯುತ, ಸಚ್ಚಾರಿತ್ರ ರಾಜಕಾರಣಿಗಳಿಗೆ ಮತ ನೀಡುವ ಮೂಲಕ ಆರೋಗ್ಯಕರ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಒತ್ತು ನೀಡಬೇಕೆಂದರು.
ತಹಸೀಲ್ದಾರ್ ಜಗದೀಶ್ ಮಾತನಾಡಿ, ದೇಶದ ಯುವಶಕ್ತಿ ಮನಸು ಮಾಡಿದರೆ ಶಕ್ತಿಶಾಲಿ ರಾಷ್ಟ್ರನಿರ್ಮಾಣ ಸಾಧ್ಯವೆಂಬುದನ್ನು ಮನಗಂಡೆ ಮಾಜಿ ಪ್ರದಾನಿ ದಿ.ರಾಜೀವ್‌ಗಾಂಧಿ, ಹದಿನೆಂಟು ವರ್ಷಕ್ಕೆ ಮತದಾನ ಮಾಡುವ ಹಕ್ಕನ್ನು ದೇಶದ ಯುವಶಕ್ತಿಗೆ ಕಲ್ಪಿಸಿದರು. ಆದರೆ ಯುವಜನಾಂಗ ಸದೃಢ, ಶಕ್ತಿಶಾಲಿ ರಾಷ್ಟ್ರ ನಿರ್ಮಾಣ ದಿಸೆಯಲ್ಲಿ ತಮಗೆ ನೀಡಲಾಗಿರುವ ಸಂವಿಧಾನಬದ್ಧ ಹಕ್ಕಿನ ಚಲಾವಣೆ ಸಮಯದಲ್ಲಿ ಮತದಾನದಿಂದ ಹಿಂದುಳಿಯುವ ನಿರ್ಲಕ್ಷ್ಯ ಪ್ರವೃತ್ತಿಯ ಪರಿಣಾಮ ಒಟ್ಟಾರೆ ಮತದಾನದ ಮೇಲೂ ಪರಿಣಾಮ ಬೀರುತ್ತಿದ್ದು, ಇನ್ನಾದರೂ ಯುವಮತದಾರರು ಜಾಗೃತರಾಗಬೇಕೆಂದರು.
ಪುರಸಭಾಧ್ಯಕ್ಷೆ ನಳಿನಾಭೈರಪ್ಪ ಯುವಮತದಾರರಿಗೆ ಎಪಿಕ್‌ಕಾರ್ಡ್ ವಿತರಿಸಿದ್ದು, ಚುನಾವಣಾ ಶಿರಸ್ತೆದಾರ್ ತಿಮ್ಮಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಪುರಸಭಾ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ರಹಮತ್‌ವುಲ್ಲಾ, ಎಪಿಎಂಸಿ ಸದಸ್ಯ ಸುರೇಶ್, ತಾಲೂಕು ಪೌರಸೇವಾಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು,
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.