ಕೆರೆ ಒತ್ತುವರಿ ತೆರವಿಗೆ ಲೋಕಾಯುಕ್ತಕ್ಕೆ ಪತ್ರ
ತುಮಕೂರು: ಬದಲಾದ ರಾಜಕೀಯ ಸ್ಥಿತಿ-ಗತಿ ಹಿನ್ನೆಲೆಯಲ್ಲಿ ಪ್ರಭಾವಿ ರಾಜಕಾರಣಿಗಳಿಲ್ಲದೆ ಶಿರಡಿ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿರಡಿ ಸಾಯಿಬಾಬಾ ಮಂದಿರದ ಪ್ರಮುಖ ರೂವಾರಿ ಹಾಗೂ ಬಿಜೆಪಿ ಸಂಸದರಾಗಿದ್ದರೂ, ಕೆಜೆಪಿ ಜತೆ ಗುರುತಿಸಿಕೊಂಡಿರುವ ಜಿ.ಎಸ್. ಬಸವರಾಜ್, ಅಂದು ಶಿರಡಿ ಸಾಯಿಬಾಬಾ ಮಂದಿರ ಉದ್ಘಾಟನೆಗೆ ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪ, ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳು ಆಗಮಿಸಿದ್ದರು. ಅಂದು ರಾಜಕೀಯ ಸ್ಥಿತಿ-ಗತಿ ಹಾಗಿತ್ತು. ಇಂದು ರಾಜಕೀಯ ಸ್ಥಿತಿ -ಗತಿ ಬದಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಂದಿ ಮತ್ತು ಸಾಯಿಬಾಬಾ ಮಂಟಪದ ಸಿಂಹಾಸನ ಪ್ರತಿಷ್ಠಾಪನಾ ಮಹೋತ್ಸವವನ್ನು ಪೆ. 2 ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗಿನಿಂದ ರಾತ್ರಿ 9-30 ರವರೆಗೆ ನಿರಂತರವಾಗಿ ಪೂಜೆ, ಭಜನೆ, ಸಾಂಸೃತಿಕ ಮೇಳ, ಮರವಣಿಗೆ ಹಮ್ಮಿಕೊಳ್ಳಲಾಗಿದೆ. ಬಾಬಾ ಮೂರ್ತಿಯೊಂದಿಗೆ ಗಣಪತಿ, ಪಾರ್ವತಿ, ಪರಮೇಶ್ವರ, ದತ್ತಾತ್ರೇಯ, ಶ್ರೀರಾಮ, ಲಕ್ಷ್ಮಣ, ಸೀತೆ ಸಮೇತ, ಆಂಜನೇಯ ದೇಗುಲಗಳು ಹಾಗೂ ದ್ವಾರಕಾಮಯಿ ರೂಪುಗೊಂಡಿದೆ. ಗಾಂಧಿನಗರ, ಬನಶಂಕರಿ, ಅಮರಜ್ಯೋತಿನಗರ, ಸರಸ್ವತಿಪುರಂ ಗಳಲ್ಲಿ ಭಿಕ್ಷಾಟನೆ ಕಾರ್ಯಕ್ರಮ ಜರುಗಲಿದೆ. ಕಂಚಿನ ಲೋಹ ಬಳಸಿ ಶಿರಡಿ ರೀತಿಯಲ್ಲಿ ಪೀಠ ಪ್ರಭಾವಳಿ ಮಾಡಲಾಗುವುದು. ಚಿನ್ನದ ಪೀಠ ಮಾಡಿಸಲು ತಮ್ಮ ಬಳಿ ದುಡ್ಡಿಲ್ಲ. ಚಿನ್ನದ ಪೀಠ ಮಾಡಿಸಲು ಕನಿಷ್ಠ 30 ರಿಂದ 35 ಕೋಟಿ ರು. ಗಳಾಷ್ಟಾದರೂ ಬೇಕು. ಇದು ಸಾಧ್ಯವಿಲ್ಲದ ಕಾರಣ ಕಂಚಿನ ಪೀಠ ಮಾಡಿಸಲು ತೀರ್ಮಾನಿಸಲಾಗಿದೆ. ಇದಕ್ಕೆ 3 ರಿಂದ 4 ಲಕ್ಷ ರು. ಖರ್ಚಾಗಬಹುದು ಎಂಬ ಅಂದಾಜಿದೆ ಎಂದು ಬಸವರಾಜು ಮಾಹಿತಿ ನೀಡಿದರು.
ಕೆರೆ ಒತ್ತುವರಿ ತನಿಖೆಗೆ ಪತ್ರ: ತುಮಕೂರಿನ ಅಮಾನಿಕೆರೆ ಹಾಗೂ ಮರಳೂರು ದಿಣ್ಣೆ ಕೆರೆಗಳು ಹಾಗೂ ಮಳೆ ನೀರು ಹರಿದು ಬರಲು ಮಾಡಲಾಗಿರುವ ರಾಯಗಾಲುವೆಗಳು ಒತ್ತುವರಿ ಹಾಗೂ ಅಮಾನಿಕೆರೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಾವು ಹಿಂದೆ ಆರೋಪ ಮಾಡಿದ್ದೆ. ಲೋಕಾಯುಕ್ತ ತನಿಖೆಗೆ ಪತ್ರ ಬರೆಯುವುದಾಗಿಯೂ ಘೋಷಿಸಿದ್ದೆ. ಅದರಂತೆ ಒಂದು ವಾರದ ಹಿಂದೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿ, ಪತ್ರ ಬರೆದಿರುವುದಾಗಿ ಸಂಸದ ಜಿ.ಎಸ್. ಬಸವರಾಜು ಇದೇ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಾಲೆ ಚಂದ್ರಯ್ಯ, ಕುಂದರನಹಳ್ಳಿ ರಮೇಶ್, ಶಿರಡಿ ಸಾಯಿಬಾಬಾ ಸೇವಾ ಸಮಿತಿ ಸದಸ್ಯರು, ಇತರರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.