ಉತ್ತಮ ತೀರ್ಪಿಗೆ ವಕೀಲರ ಪ್ರಾಮಾಣಿಕ ಪ್ರಯತ್ನ ಮುಖ್ಯ
ಶಿರಾ: ನ್ಯಾಯಾಧೀಶರು ಉತ್ತಮ ತೀರ್ಪು ನೀಡಬೇಕಾದರೆ ವಕೀಲರ ಪ್ರಾಮಾಣಿಕ ಪ್ರಯತ್ನ, ಬದ್ಧತೆ ಹಾಗೂ ಕಾರ್ಯವೈಖರಿ ಮುಖ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾ. ಡಿ.ವಿ.ಶೈಲೆಂದ್ರಕುಮಾರ್ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯ ಕಟ್ಟಡದಲ್ಲಿ ನೂತನವಾಗಿ ನಿರ್ಮಿತವಾದ ಮೊದಲನೆ ಮಹಡಿ ಕಟ್ಟಡವನ್ನು ಉದ್ಘಾಟಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, ಶಾಸಕಾಂಗ, ಕಾರ್ಯಾಂಗಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಂಗಕ್ಕೆ ಹೆಚ್ಚಿನ ಮಹತ್ವ ದೊರಕುತ್ತಿದೆ. ಶಾಸಕಾಂಗ ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ನೋಡಿಕೊಳ್ಳುವ ಮಹತ್ವದ ಹೊಣೆಗಾರಿಕೆ ಕೂಡ ನ್ಯಾಯಾಂಗದ ಮೇಲಿದೆ ಎಂದರು.
ಶೀಘ್ರ ಇತ್ಯರ್ಥ ಕರ್ತವ್ಯ: ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಎಚ್.ಬಿ. ಪ್ರಭಾಕರ ಶಾಸ್ತ್ರಿ ವಹಿಸಿ ಮಾತನಾಡಿ, ಸಕಾಲದಲ್ಲಿ ಶೀಘ್ರವಾಗಿ ಕೇಸುಗಳನ್ನು ಇತ್ಯರ್ಥಪಡಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ವಕೀಲರ ಸಂಘದ ಅಧ್ಯಕ್ಷ ಪಿ.ಬಿ. ಭೂಪತಿಗೌಡ ಅವರು ಮಾತನಾಡಿ ಶಿರಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಕಟ್ಟಡ ಅಗತ್ಯವಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಿಲಕೊಪ್ಪ ಅವರು ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಜೆ.ಎಂ.ಎಫ್.ಸಿ. ನ್ಯಾಯಾಧೀಶ ಟಿ.ಗೋವಿಂದಯ್ಯ, ಶಾಸಕ ಟಿ.ಬಿ. ಜಯಚಂದ್ರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನಿ ಗೋಪಾಲಗೌಡ, ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರುಗಳು, ಸ್ತ್ರೀಶಕ್ತಿ ಸಂಘದವರು, ಸಾರ್ವಜನಿಕರು ಹಾಜರಿದ್ದರು.
ವಕೀಲ ಮಾಲಿ ಮರಿಯಪ್ಪನವರು ಸ್ವಾಗತಿಸಿ, ಹಿರಿಯ ವಕೀಲರಂದ ಸರ್ವೇಶ್ ವಂದಿಸಿದರು.