ಬಿಇಒ ವಿರುದ್ಧ ಕ್ರಮ ಕೈಗೊಳ್ಳಿ
ಶಿರಾ: ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜದ ಹಗ್ಗ ತುಂಡಾಗಿ ಧ್ವಜ ನೆಲಕ್ಕೆ ಬಿದ್ದು ರಾಷ್ಟ್ರಭಕ್ತಿಗೆ ಅಪಮಾನವಾದ ಘಟನೆಗೆ ಸಂಬಂಧಿಸಿದಂತೆ ಕೇವಲ 4 ಮಂದಿ ಶಿಕ್ಷಕರನ್ನು ಗುರಿ ಮಾಡುವುದು ಸಾಧುವಲ್ಲ. ಹೆಚ್ಚಿನ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳದ್ದೆ ಆಗಿದ್ದು, ಉಪನಿರ್ದೆಶಕರು ಕೂಡಲೇ ಇಲ್ಲಿನ ಬಿಇಒ ರಾಜ್‌ಕುಮಾರ್‌ರನ್ನು ಅಮಾನತುಗೊಳಿಸಬೇಕೆಂದು ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ತಿಳಿಸಿದ್ದಾರೆ.
ಸಮರ್ಪಕ ಬಸ್ ಸೇವೆಗೆ ಒತ್ತಾಯ
ತುಮಕೂರು: ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸಮರ್ಪಕ ಕಾರ್ಯಾಚರಣೆಗೆ ಒತ್ತಾಯಿಸಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಸೋಮವಾರ ಧರಣಿ ನಡೆಸಿದರು. ತೋವಿನಕೆರೆಯಿಂದ ಕೆಸ್ತೂರು, ಬ್ರಹ್ಮಸಂದ್ರ, ಮುದ್ದೇನಹಳ್ಳಿ ಮಾರ್ಗವಾಗಿ ತುಮಕೂರಿಗೆ ನಿತ್ಯ ಶಿರಾ ರಿಟರ್ನ್ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿದೆ. ಕೆಲವೆಡೆ ನಿಲ್ದಾಣವಿದ್ದರೂ ಬಸ್ ನಿಲ್ಲಿಸುವುದಿಲ್ಲ. ಸೋಮವಾರ ಈ ಬಸ್ ಬ್ರಹ್ಮಸಂದ್ರ ಗ್ರಾಮಕ್ಕೆ ಅನತಿ ದೂರದ ರಾಜೀವನಗರದ ಸಮೀಪ ಬಂದಿದೆ. ವಿದ್ಯಾರ್ಥಿಗಳು ಕೈ ಅಡ್ಡಗಟ್ಟಿದಾಗ ಚಾಲಕ, ನಿರ್ವಾಹಕ ಬಸ್ ನಿಲ್ಲಿಸಲಿಲ್ಲ. ಸಿಟ್ಟಾದ ಗ್ರಾಮಸ್ಥರೇ ಬಸ್ ಅಡ್ಡಗಟ್ಟಿ ನಿಲ್ಲಿಸಿ ಚಾಲಕ, ನಿರ್ವಾಹಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಸ್ಥಳಕ್ಕೆ ಕೋರಾ ಠಾಣೆ ಇನ್ಸ್‌ಪೆಕ್ಟರ್ ಅವಿನಾಶ್ ಸಿಬ್ಬಂದಿ ಕಳುಹಿಸಿ ಸಮಸ್ಯೆ ಅವಲೋಕಿಸುವಂತೆ ತಾಕೀತು ಮಾಡಿದ್ದು ಸಮಸ್ಯೆ ಅರಿತ ಸಿಬ್ಬಂದಿ ಇದನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ಪಟ್ಟು ಬಿಡದ ವಿದ್ಯಾರ್ಥಿಗಳು ಈ ಸಮಸ್ಯೆ ಬಗೆಹರಿಸುವಂತೆ ಘಟಕ ವ್ಯವಸ್ಥಾಪಕರ ಬಳಿ ತೆರಳಿದ್ದಾರೆ. ಘಟಕ ವ್ಯವಸ್ಥಾಪಕರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬೇಸತ್ತ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗ ಧರಣಿ ನಡೆಸಿದರು. ಆಗ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದರು.
ಅಂಗನವಾಡಿ
ಹುದ್ದೆಗೆ ಅರ್ಜಿ
ಪಾವಗಡ: ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಗಂಗಸಾಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸ್ಥಾನಕ್ಕೆ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಗಂಗಸಾಗರ ಗ್ರಾಮದ ಎ.ಕೆ.ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯ ಸ್ಥಾನ ಖಾಲಿ ಇದ್ದು ಎಸ್ಸಿ ಮೀಸಲು ಪರಿಶಿಷ್ಟ ಜಾತಿಗೆ ಸೇರಿದ ಸ್ಥಳೀಯ ಅರ್ಹ ಆಭ್ಯರ್ಥಿಗಳನ್ನು ನೇಮಕ ಮಾಡುವ ಸಲುವಾಗಿ ಇಲಾಖೆಯಿಂದ ಅರ್ಜಿ ಆಹ್ವಾನಿಸಿ ಪ್ರಕಟಣೆ ಹೂರಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಫೆ.8ಸಂಜೆ 5.30ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕನ್ನಿಕಾಪರಮೇಶ್ವರಿ ದೇವಸ್ಥಾನದ ಹತ್ತಿರ, ಶ್ರೀನಿವಾಸ ನಗರ, ಪಾವಗಡಇಲ್ಲಿಗೆ ಸಲ್ಲಿಸಲು ಸಿಡಿಪಿಒ ಉಷಾ ತಿಳಿಸಿದ್ದಾರೆ.