ಸಂಸ್ಕೃತ ವಿದ್ಯಾರ್ಥಿ ಸಮ್ಮೇಳನದ ಸಮಾರೋಪ
ತುಮಕೂರು: ಭಾರತದ ಅಸ್ಮಿತೆ ಸಂಸ್ಕೃತದಲ್ಲಿದೆ. ಸಂಸ್ಕೃತವನ್ನು ಅರಿಯದೆ ಭಾರತವನ್ನು ಅರ್ಥಮಾಡಿಕೊಳ್ಳಲಾಗದು ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ಕಾಮತ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸಂಸ್ಕೃತ ಭಾರತಿ ಸಹಯೋಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಂಸ್ಕೃತ ವಿದ್ಯಾರ್ಥಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತದ ಅಂತಃಸತ್ವ ಸಂಸ್ಕೃತದಲ್ಲಿದೆ. ಅದು ಭಾರತೀಯ ಸಂಸ್ಕೃತಿಯ ವಾಹಕವಾಗಿದೆ ಎಂದರು.
ಕನ್ನಡವನ್ನೂ ಒಳಗೊಂಡಂತೆ ಎಲ್ಲ ಭಾರತೀಯ ಭಾಷೆಗಳನ್ನು ಉಳಿಸಿ ಸಮೃದ್ಧಗೊಳಿಸಲು ಸಂಸ್ಕೃತ ಅನಿವಾರ್ಯವಾಗಿದೆ. ಸಂಸ್ಕೃತವು ಒಂದು ಆಧುನಿಕ ಭಾಷೆಯಾಗಿಯೂ ಬೆಳೆಯುತ್ತಿದ್ದು, ಯುವಕರು ಅದರ ಪ್ರಸಾರದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಹೇಗೆ ಸಾಧ್ಯ: ಸಂಸ್ಕೃತದಲ್ಲಿ 45 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳಿವೆ. ವಿದೇಶಗಳಲ್ಲಿ ಸುಮಾರು 240 ವಿಶ್ವವಿದ್ಯಾನಿಲಯಗಳಲ್ಲಿ ಇಂದು ಸಂಸ್ಕೃತವನ್ನು ಬೋಧಿಸಲಾಗುತ್ತಿದೆ. ಸಂಸ್ಕೃತ ಭಾರತಿಯೇ ಸುಮಾರು 39 ದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸಿದೆ. ಅಮೆರಿಕದ 40 ಮಹಾನಗರಗಳಲ್ಲಿ ವಾರಾಂತ್ಯದ ಸಂಸ್ಕೃತ ತರಗತಿಗಳನ್ನು ನಡೆಸಲಾಗಿದೆ. ಸಂಸ್ಕೃತ ಒಂದು ಮೃತಭಾಷೆಯಾಗಿರಲು ಹೇಗೆ ಸಾಧ್ಯ ಎಂದು ಕಾಮತ್ ಪ್ರಶ್ನಿಸಿದರು.
ದುರದೃಷ್ಟಕರ: ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಂಸ್ಕೃತದಲ್ಲಿ ವ್ಯವಹರಿಸುವುದು ಅವಹೇಳನಕಾರಿ ಎಂಬ ಬ್ರಿಟಿಷ್ ಕಾಲದ ಜಾಯಮಾನ ಇಂದೂ ಮುಂದುವರಿದಿರುವುದು ದುರದೃಷ್ಟಕರ ಎಂದರು.
ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಸುಭಾಸ್ಚಂದ್ರ ಭೋಸ್, ಚಂದ್ರಶೇಖರ ಆಜಾದ್, ವಲ್ಲಭಬಾಯಿ ಪಟೇಲ್ ಮೊದಲಾದ ರಾಷ್ಟ್ರನಾಯಕರು ಸಂಸ್ಕೃತಾಧ್ಯಯನದ ಪರವಾಗಿದ್ದವರು. ಅಂಬೇಡ್ಕರ್ ಸಂಸ್ಕೃತವು ರಾಷ್ಟ್ರ ಭಾಷೆ ಆಗಬೇಕೆಂದು ಬಯಸಿದ್ದರು. ಆದರೆ ಭಾಷೆಗಳನ್ನು ಜಾತಿಗಳೊಂದಿಗೆ ಸಮೀಕರಿಸುವ ರಾಜಕಾರಣವು ಮುಂದುವರಿಯುತ್ತಾ ಬಂತು ಎಂದು ವಿಶ್ಲೇಷಿಸಿದರು.
ಭಾರತದ ಮೌಲ್ಯಗಳು ಹಾಗೂ ಪರಂಪರೆ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ವಿಶೇಷ ಒಲವು ಅಭಿಮಾನಗಳಿವೆ. ಆದರೆ ಪಾಶ್ಚಾತ್ಯರಿಂದ ಬಂದುದೇ ಹೆಚ್ಚು ಸರಿಯಾದದ್ದು ಎಂಬ ಅಂಧಾಭಿಮಾನ ಭಾರತೀಯರಲ್ಲಿದೆ. ಭಾರತ ತನ್ನ ನೈಜ ವೈಭವವನ್ನು ಮತ್ತೆ ಪಡೆಯಬೇಕಾದರೆ ಸಂಸ್ಕೃತಕ್ಕೆ ವಿಶೇಷ ಪ್ರಾಶಸ್ತ್ಯ ಸಿಗಬೇಕು ಎಂದರು.
ವಿವಿಧ ಸಂಸ್ಕೃತ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ಸಿ. ಶರ್ಮಾ, ಪರೀಕ್ಷಾಂಗ ಕುಲಸಚಿವ ಎನ್. ಲಕ್ಷ್ಮೀಕಾಂತ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.