ಕೆಜೆಪಿ ಅಧಿಕಾರಕ್ಕೆ ತನ್ನಿ
ಶಿರಾ: ರಾಜ್ಯದ ಅಭಿವೃದ್ಧಿಯ ಕನಸುಗಾರ ಮಾಜಿ ಮುಖ್ಯಮಂತ್ರಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಎಲ್ಲಾ ಸಮುದಾಯಗಳ ಹಿತ ರಕ್ಷಿಸಿದ್ದಾರೆ. ಅವರನ್ನು ಮತ್ತೊಮ್ಮ ಅಧಿಕಾರಕ್ಕೆ ತಂದರೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಕೆಜೆಪಿ ಮುಖಂಡ ಡಿ.ಸಿ.ನಾಗಭೂಷಣ್ ತಿಳಿಸಿದ್ದಾರೆ.
ಅವರು ಪಟ್ಟಣದ ಶ್ರೀ ರೇವಣ್ಣ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕೆ.ಜೆ.ಪಿ. ಪಕ್ಷದಿಂದ ಏರ್ಪಡಿಸಿದ್ದ ಶಿರಾ ವಿಧಾನಸಭಾ ಕ್ಷೇತ್ರದ ಬೂತ್ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಬಿ.ಜೆ.ಪಿ. ಕಳೆದ 40 ವರ್ಷಗಳಿಂದ ರಾಜ್ಯದಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದವರು ತಮ್ಮ ಆಡಳಿತಾವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆ, ರೈತರ ಸಾಲ ಮನ್ನಾ, ಶೇ. 3 ರಷ್ಟು ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಲ್ಲಾ ಜನಾಂಗದ ಬಡವರ ಕಲ್ಯಾಣಕ್ಕೆ ಶ್ರಮಿಸಿದವರು. ಅಂತಹ ಜನೋಪಯೋಗಿ ಯೋಜನೆಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದು ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸಹಕಾರ ನೀಡಿ: ಜನರ ಸಮಸ್ಯೆಗಳಿಗೆ ಹೋರಾಟ ಮಾಡುವ ವ್ಯಕ್ತಿ ನಾಯಕನಾಗುತ್ತಾನೆ. ಬೇರು ಮಟ್ಟದಿಂದ ಸಂಘಟನೆ ಮಾಡಿ ಪಕ್ಷವನ್ನು ಬೆಳೆಸುವಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಹಕರಿಸಬೇಕು. ಸಂಸದ ಜಿ.ಎಸ್. ಬಸವರಾಜು ಅವರು ದೂರ ದೃಷ್ಟಿ ಇರುವ ನಾಯಕರು. ಅವರ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಕನಿಷ್ಠ 8 ಸ್ಥಾನಗಳನ್ನು ತುಮಕೂರು ಜಿಲ್ಲೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.
ಪ್ರಾಬಲ್ಯ: ಕೆ.ಜೆ.ಪಿ. ಕಾನೂನು ಘಟಕದ ರಾಜ್ಯ ಸಂಚಾಲಕ ಆರ್.ರಾಜಣ್ಣ ಮಾತನಾಡಿ ದೇಶದ 13 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಹೀಗಾಗಿ ಇನ್ನು ಮುಂದೆ ಕರ್ನಾಟಕದಲ್ಲಿ ಪ್ರಾದೇಶಕ ಪಕ್ಷಕ್ಕೆ ಪ್ರಾಬಲ್ಯ, ಬೇರೆ ಯಾವುದೇ ಮುಖ್ಯಮಂತ್ರಿ ರಾಜ್ಯಕ್ಕೆ ನೀಡಿರದಷ್ಟು ಸವಲತ್ತುಗಳನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಎಂ.ಆರ್.ನಾಗಭೂಷಣ್, ವಾಜಿದ್ ಖಾನ್ ಮಾತನಾಡಿ ರಾಜ್ಯದಲ್ಲಿ ಎಷ್ಟೋ ಪಕ್ಷಗಳು ಬಂದು ಹೋಗಿವೆ. ಆದರೆ ಕೆ.ಜೆ.ಪಿ. ಕಾರ್ಯಕರ್ತರು ಮತ್ತು ಮತದಾರರ ಪಕ್ಷವಾಗಬೇಕು. ಯಡಿಯೂರಪ್ಪ ಭಾವಚಿತ್ರ ನಮಗೆ ಒಂದು ಪ್ರಣಾಳಿಕೆ. 60 ವರ್ಷಗಳಲ್ಲಿ ರಾಜ್ಯದಲ್ಲಿ ಆಗಿರದ ಸಾಧನೆ ಕೇವಲ 3 ವರ್ಷಗಳಲ್ಲಿ ಆಗಿದೆ. ಬಿಜೆಪಿಯಲ್ಲಿನ ಶೇ. 50 ಶಾಸಕರು ಮತ್ತು ಕಾರ್ಯಕರ್ತರು ಸದ್ಯದಲ್ಲೆ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದರು.
ಯುವ ಮುಖಂಡ ಮುಬಾರಕ್, ಸಂತೇಪೇಟೆ ಜಯರಾಮ್, ವಕೀಲ ಮಾಗೋಡು ಜಗದೀಶ್, ಪ್ರೇಮ್ಕುಮಾರ್, ಯತೀಶ್, ವೇಣುಗೋಪಾಲ್, ವಿನುತ, ಕರಿದಾಸರಹಳ್ಳಿ ನಿಜಲಿಂಗಪ್ಪ, ತೌಫಿಕ್ ಉಲ್ಲಾ ಖಾನ್, ಮತ್ತಿತರರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.