ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳಾ ಸಂವಿಧಾನಬದ್ಧ ಹಕ್ಕು ಉಲ್ಲಂಘನೆ

Parashurama
Updated On : 29 Jan 2013, 11:19 am

ತುಮಕೂರು: ಪ್ರತಿನಿತ್ಯ ಮಹಿಳೆಯ ಸಂವಿಧಾನಬದ್ದ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ವಕೀಲ ಹಾಗೂ ಉಪನ್ಯಾಸಕ ಎಸ್. ರಮೇಶ್ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಾಟಾಗಿದ್ದ ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ ಅನುಶ್ಛೇದ 14,15,16 ಹಾಗೂ ಅನುಶ್ಛೇಧ 21 ಸಮಾನತೆಯನ್ನು ಉದ್ಘೋಷಿಸಿದ್ದರೂ, ಭಾರತೀಯ ಸಮಾಜದಲ್ಲಿ ಪ್ರತಿದಿನ ಮಹಿಳೆಯ ಸಂವಿಧಾನ ಬದ್ಧ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗುವಂತಹ ವರ್ತನೆಗಳು ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವುದು ಸಂವಿಧಾನವನ್ನು ಅಣಕಿಸುವಂತಿದೆ. ಇದೊಂದು ಸಂವಿಧಾನಕ್ಕೆ ಬಗೆದ ಅಪಚಾರವೇ ಸರಿ. ಈ ಅಸಮಾನತೆಯನ್ನು ಹೋಗಲಾಡಿಸುವ ಹಿನ್ನೆಲೆಯಲ್ಲಿ ಸಂವಿಧಾನದ ನಡೆ-ನುಡಿಗೆ ಯುವ ಜನಾಂಗ ಸಂಕಲ್ಪ ತೊಡಬೇಕು. ಆಗ ಮಾತ್ರ  ಉತ್ತಮವಾದ ನಾಗರಿಕ ಸಮಾಜ, ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯ ಎಂದು ರಮೇಶ್ ಪ್ರತಿಪಾದಿಸಿದರು.
ಮಾರಾಟ ವಸ್ತು: ನಾಗರಿಕತೆಯ ಉದಯಕ್ಕೆ ಕಾರಣಳಾದ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಗ್ರಾಹಕ ವಸ್ತುಗಳ ಮಾರಾಟ ರಾಯಭಾರಿಯಾಗಿ ಬಿಂಬಿಸಿ, ಅವಳನ್ನು ಮಾರಾಟ ವಸ್ತುವಾಗಿ ಮಾರ್ಪಡಿಸುವ ಮೂಲಕ ಸಂವಿಧಾನ ಬದ್ಧವಾದ ಹಕ್ಕುಗಳನ್ನು ದಮನಗೊಳಿಸಿರುವುದು ನಾಗರಿಕ ಸಮಾಜದ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ನಾಗರಿಕತೆಯ ಬುನಾದಿಗೆ ಕಾರಣಳಾದ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆ ತನ್ನ ಅಂಕುಶದಲ್ಲಿಟ್ಟುಕೊಳ್ಳುವ ಮೂಲಕ ಆಕೆಯ ಸಂವಿಧಾನ ಹಾಗೂ ನೈಸರ್ಗಿಕ ಹಕ್ಕುಗಳನ್ನು ಹರಣ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ತಕ್ಕುದಲ್ಲ. ಜತೆಗೆ ನಿಜವಾದ ಪ್ರಜಾಪ್ರಭುತ್ವ ಅರ್ಥದ ಕಲ್ಪನೆಗೆ ಮಾರಕವಾಗಿದೆ. ಮಹಿಳೆಯನ್ನು ಕೇವಲ ಭೋಗದ ವಸ್ತುವನ್ನಾಗಿ ನೋಡುತ್ತಿರುವುದು, ಆಕೆಯನ್ನು ಕೇವಲ ಗಂಡ ಮತ್ತು ಮಕ್ಕಳ ಆರೈಕೆಗೆ ಮಾತ್ರ ಸೀಮಿತಗೊಳಿಸಿಕೊಂಡಿರುವ ಅಕ್ಷರಸ್ಥ ಸಮಾಜ ನಾಚಿಕೆಪಟ್ಟುಕೊಳ್ಳುವಂತಹ ಸಂಗತಿಯಾಗಿದೆ. ಸಮಾನತೆ ಸಂವಿಧಾನಕ್ಕೆ ಸೀಮಿತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಂವಿಧಾನಕ್ಕೆ ಅಪಚಾರ: ಸಂವಿಧಾನದ ಜತೆಗೆ ಹಲವಾರು ಕಾನೂನುಗಳು ಜಾರಿಯಲ್ಲಿದ್ದರೂ, ಅವುಗಳ ಸಮರ್ಪಕ ಜಾರಿಗೆ ಸರ್ಕಾರ ಹಾಗೂ ಆಡಳಿತಾಂಗ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದು ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಾರಣವಾಗಿದೆ. ಇದೊಂದು ರೀತಿ ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಹಾಲಿ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ಸಮಾನ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಎಸ್. ರಮೇಶ್ ಬಲವಾಗಿ ಪ್ರತಿಪಾದಿಸಿದರು.ಸಮಾರಂಭದಲ್ಲಿ ಉಪಸ್ಥಿತರಿದ್ದ ವಿದ್ಯಾವಾಹಿನಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳು ವಿಶೇಷ ಉಪನ್ಯಾಸದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಟಿ.ಬಿ. ಗುರುರಾಜ್, ನಿರ್ದೇಶಕ ಪ್ರೊ. ಆರ್.ರವಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments