ಸರ್ಕಾರದಿಂದ ದೊರೆಯುವ ಸವಲತ್ತು ಸದುಪಯೋಗ ಪಡಿಸಿಕೊಳ್ಳಲು ಕರೆ
ಹುಳಿಯಾರು: ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ಹಾಗೂ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆ ರ್ಥಿಕವಾಗಿ ಹಿಂದುಳಿದ ಸವಿತಾ ಸಮಾಜದವರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೊರೆಯುವಂತಹ ಸವಲತ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸವಿತಾ ಸಮಾಜದವರು ಅಭಿವೃದ್ಧಿಯಾಗಬೇಕೆಂದು ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ತಿಳಿಸಿದರು.
ಪಟ್ಟಣದ ಶಂಕರಪುರ ಬಡಾವಣೆಯ ತ್ಯಾಗರಾಜ ಮಂದಿರದಲ್ಲಿ ಮಂಗಳವಾರ ನಡೆದ ಶ್ರೀತ್ಯಾಗರಾಜ ಸ್ವಾಮಿಯವರ ಆರಾಧನಾ ಕಾರ್ಯಕ್ರಮ ಮತ್ತು ಸವಿತಾ ಸಮಾಜದ ಪ್ರಥಮ ವರ್ಷದ ವಾರ್ಷಿಕೋತ್ಸವವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರೆನಿಸಿರುವ ತ್ಯಾಗರಾಜರು ನೂರಾರು ರಾಗಕೃತಿಗಳನ್ನು ರಚಿಸಿದ್ದು, ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆಂದರು. ತ್ಯಾಗರಾಜರ ಪರಂಪರೆಯನ್ನು ಮುಂದುವರಿಸುವ ಮೂಲಕ ಅವರಿಗೆ ಗೌರವ ಅರ್ಪಿಸಬೇಕು ಹಾಗೂ ಸವಿತಾ ಸಮಾಜಬಾಂಧವರು ಸಂಘಟಿತರಾಗುವ ಮೂಲಕ ನ್ಯಾಯಬದ್ಧ ಹಕ್ಕನ್ನು ಪಡೆದು, ಸಮಾಜದಲ್ಲಿ ಪ್ರಗತಿಯನ್ನು ಹೊಂದಬೇಕೆಂದರು.
ಹುಳಿಯಾರು ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ, ಸದಸ್ಯ ರಾಘವೇಂದ್ರ, ಜಿ.ಪಂ.ಸದಸ್ಯೆ ಮಂಜುಳಾ, ಸ್ವಾತಂತ್ರಹೋರಾಟಗಾರರ ಸಂಘದ ಅಧ್ಯಕ್ಷ ವೆಂಕಟಾಚಲಪತಿ ಶೆಟ್ಟಿ, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುಬ್ರಹ್ಮಣ್ಯ, ಹುಳಿಯಾರು ಸವಿತಾ ಸಮಾಜದ ಉಪಾಧ್ಯಕ್ಷ ಸಣ್ಣರಾಜಪ್ಪ, ಗ್ರಾಮಲೆಕ್ಕಿಗ ಶ್ರೀನಿವಾಸ್ ಸೇರಿದಂತೆ ಸವಿತಾ ಸಮಾಜದ ಬಂಧುಗಳು ಉಪಸ್ಥಿತರಿದ್ದರು. ಹಿರಿಯ ಕಲಾವಿದರಾದ ಟಿ.ಸಿದ್ದಪ್ಪ,ನಾರಾಯಣಪ್ಪ, ರಂಗನಾಥಪ್ಪ, ರಾಮಯ್ಯ, ನಾಗರಾಜಪ್ಪ, ಶಿವಲಿಂಗಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ತ್ಯಾಗರಾಜರ ಭಾವಚಿತ್ರವನ್ನು ಸಿಂಗರಿಸಿ ಪಟ್ಟಣದ ರಾಜಬೀದಿಗಳಲ್ಲಿ ವಾದ್ಯಗೋಷ್ಠಿ, ಸ್ಯಾಕ್ಸೋಫೋನ್, ನಾದಸ್ವರ ವಾದನ, ಡೋಲು ಬಡಿತ ಹಾಗೂ ಪಟಾಕಿಸಿ ಸಿಡಿಸುತ್ತಾ ಮೆರವಣಿಗೆಯನ್ನು ನಡೆಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.