ಚಿಕ್ಕನಾಯಕನಹಳ್ಳಿ: ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಅಧಿಕಾರಿಗಳೆ ಬಸವ-ಇಂದಿರಾ ವಸತಿಯೋಜನೆಯಲ್ಲಿ 3000 ಮನೆಗಳ ಹಂಚಿಕೆಯಲ್ಲಿ ಭಾರಿ ಅವ್ಯವಹಾರವೆಸಗಿರುವ ಪ್ರಕರಣ ಬುಧುವಾರ ನಡೆದ ವಸತಿ ಯೋಜನೆ ಜಾಗೃತ ಸಭೆಯಲ್ಲಿ ಬೆಳಕಿಗೆ ಬಂದು ಸದಸ್ಯರಿಂದ ಕಾವೇರಿದ ಚರ್ಚೆ ನಡೆಯಿತು.
ರಾಜೀವಗಾಂಧಿ ವಸತಿ ನಿಗಮದ ಆದೇಶದಂತೆ ಬಸವ-ಇಂದಿರಾ ವಸತಿ ಯೋಜನೆಯಡಿ ಒಟ್ಟು 3000 ಮನೆಗಳನ್ನು ಗುಡಿಸಲು ವಾಸಿ ಫಲಾನುಭವಿಗಳಿಗೆ ವಿತರಿಸಲು ನಿರ್ಣಯವನ್ನು ತಾಪಂ ಅಧಿಕಾರಿವರ್ಗ ವಸತಿ ಯೋಜನೆ ಜಾಗೃತ ಸಮಿತಿ ಸಭೆ ಕರೆಯದೆ ಕಚೇರಿಯಲ್ಲಿ ಕುಳಿತು ಸಭೆ ನಡೆಸಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಮನಬಂದಂತೆ ಸಭೆ ನಿರ್ಣಯವನ್ನು ದಾಖಲಿಸಿರುತ್ತಾರೆ ಎಂದು ಶೆಟ್ಟೀಕೆರೆ ಕ್ಷೇತ್ರದ ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ ಎಳೆಎಳೆಯಾಗಿ ಬಿಡಿಸಿಟ್ಟರು.
ಅಧಿಕಾರಿಗಳು ನಡೆಸಿರುವ ಈ ಕೃತ್ಯವನ್ನು ಸಂವಿಧಾನ ವಿರೋಧಿ ಹಾಗು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಸಭೆಯಲ್ಲಿ ಉಲ್ಲೇಖಿಸಿದರು. ಇಂತಹ ಕಾನೂನು ವಿರೋಧಿ ಕೃತ್ಯವೆಸಗಿರುವ ಅಂದಿನ ಕಾರ್ಯನಿರ್ವಹಣಾಧಿಕಾರಿ ದಯಾನಂದ್ ಅವರನ್ನು ಸಭೆಗೆ ಕೂಡಲೇ ಕರೆಸಿ,ಇಲ್ಲವೆ ಅವರ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಲು ಒತ್ತಾಯಿಸಿದರು. ಅವರ ವಿಚಾರಣೆಯಾದ ನಂತರವಷ್ಟೇ ಸಭೆಯನ್ನು ಮುಂದುವರಿಸಿ ಎಂದು ಪಟ್ಟುಹಿಡಿದು ಕುಳಿತರು.
ಅವರ ಜೊತೆಗೆ ಕಂದಿಕೆರೆ ಜಿಪಂ ಸದಸ್ಯೆ ಲೋಹಿತಾಬಾಯಿ, ತಾಪಂ ಸದಸ್ಯರಾದ ಶಶಿಧರ್, ತಾಪಂ ಅಧ್ಯಕ್ಷ ಎಂ.ಎಂ.ಜಗದೀಶ್ ಮುಂತಾದವರು ದನಿಗೂಡಿಸಿದರು. ಇದುವರೆಗು ಜನಪ್ರತಿನಿಧಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ವರ್ತಿಸಿರುವ ಅದಿಕಾರಿ ವರ್ತನೆಯನ್ನು ಖಂಡಿಸಿದ್ದಲ್ಲದೆ, ನಾಲ್ಕು ಸಭೆ ನಡೆದಿದ್ದು, ಸಭೆ ನಿರ್ಣಯ ಪುಸ್ತಕದಲ್ಲಿ ಅವರಿಗೆ ಬೇಕಾದ ಅಂಶಗಳನ್ನು ಮಾತ್ರ ಇಟ್ಟು ನಮ್ಮ ಅಭಿಪ್ರಾಯಗಳನ್ನು ದಾಖಲಿಸದೆ ನಮಗೆ ಅವಮಾನಿಸಿದ್ದಲ್ಲದೆ ನಮ್ಮನ್ನು ವಂಚಿಸಿದ್ದಾರೆ. ಇಂತಹ ಅಸಂವಿಧಾನಿಕ ನಿಲವನ್ನು ಕೈಗೊಂಡ ಅಧಿಕಾರಿ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಸೂಚಿಸಲಾಗಿತ್ತು: ಬುಕ್ಕಾಪಟ್ಣ ಹೋಬಳಿ ಸೇರಿದಂತೆ ಕ್ಷೇತ್ರದಲ್ಲಿ 6 ಹೋಬಳಿಗಳಿದ್ದು, 4000 ಸಾವಿರ ಮನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಪ್ರತಿ ಗ್ರಾಮಪಂಚಾಯ್ತಿಯ ಅಧಿಕಾರಿಗಳಿಗೆ 2 ವರ್ಷಗಳ ಹಿಂದೆ ಸೂಚಿಸಲಾಗಿತ್ತು. ಅದರಂತೆ ಗ್ರಾಮಪಂಚಾಯ್ತಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ತಾಲೂಕು ಪಂಚಾಯ್ತಿಗೆ ಸಲ್ಲಿಸಿದ್ದರು. ಈ ಪಟ್ಟಿ ಆಧಾರದಮೇಲೆ ಒಟ್ಟು ನಾಲ್ಕು ಸಾವಿರ ಮನೆ ಕ್ಷೇತ್ರಕ್ಕೆ ಮಂಜೂರಾಗಿದ್ದವು. ಮೊದಲ ಹಂತದಲ್ಲಿ 1000 ಮನೆಗಳನ್ನು 2010ರಲ್ಲಿ ಜಾಗೃತ ಸಮಿತಿ ಸಭೆಯಲ್ಲಿ ಲಾಟರಿ ಮೂಲಕ ಗ್ರಾಮಗಳನ್ನು ಆಯ್ಕೆಮಾಡಿ ಅದರಂತೆ ಹಂಚಲಾಯಿತು. ನಂತರ 5-3-2011ರಲ್ಲಿ ಸಭೆ ಕರೆದು ಯಾವುದೇ ನಿರ್ಣಯವಾಗದೆ ಸಭೆ ಅಪೂರ್ಣವಾಯಿತು. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು, ಸಭಾ ಪುಸ್ತಕದಲ್ಲಿ ಸಭೆ ನಡೆದ ರೀತಿ ದಾಖಲಿಸಿಕೊಂಡು 3000 ಮನೆಗಳನ್ನು ಲಾಟರಿ ಮೂಲಕ ವಿತರಿಸಿದಂತೆ ಪುಸ್ತಕದಲ್ಲಿ ನಮೂದಿಸಿದ್ದಾರೆ. ಈಗಾಗಲೇ ಮನೆಗಳನ್ನು ಪಡೆದ ಫಲಾನುಭವಿಗಳು, ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರವೆಸಗಿದ್ದಾರೆಂದು ಎಚ್.ಬಿ. ಪಂಚಾಕ್ಷರಿ ಆರೋಪಿಸಿದ್ದಾರೆ.
ಏಮಾರಿದ ಶಾಸಕರು: ಮತ್ತೊಂದು ಅಚ್ಚರಿಯೆಂದರೆ ಅಧಿಕಾರಿಗಳು ಸೃಷ್ಟಿಸಿರುವ ದಾಖಲೆ ಪುಸ್ತಕದ ಸುಳ್ಳು ನಿರ್ಣಯಕ್ಕೆ ಶಾಸಕರು ಸಹಿ ಹಾಕಿರುವುದು. ಈ ಬಗ್ಗೆ ಶಾಸಕರನ್ನು ಸದಸ್ಯರು ಪ್ರಶ್ನಿಸಿದಾಗ ಅವರು ಸಹಿ ನನ್ನದೆ. ನನಗೆ ಅರಿವಿಲ್ಲದಂತೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಶಾಸಕರು ತಮ್ಮ ತಪ್ಪನ್ನು ಒಪ್ಪಿಕೊಂಡರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ, ಶಿರಾ ಕಾರ್ಯನಿರ್ವಹಣಾಧಿಕಾರಿ ವೇದಮೂರ್ತಿ, ಜಿಪಂ ಸದಸ್ಯೆ ಜಾನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್, ಎ.ಬಿ. ರಮೇಶ್ ಕುಮಾರ್, ಜಯಣ್ಣ, ಹೇಮಾವತಿ,ಚೇತನ ಮುಂತಾದವರಿದ್ದರು.