ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡನಾಡಲ್ಲೇ ಕನ್ನಡಕ್ಕೆ ಕುತ್ತು

Vishwanath S
Updated On : 2 Jul 2013, 1:09 am

ಚಿಕ್ಕನಾಯಕನಹಳ್ಳಿ: ಕನ್ನಡನಾಡಿನಲ್ಲಿ ಕನ್ನಡತನ ಮರೆಯಾಗುತ್ತಿದ್ದು ಕನ್ನಡಿಗರಾದ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ಬಿ.ನಂದೀಶ್ ನುಡಿದರು.
ಅವರು ಚಿ.ನಾ.ಹಳ್ಳಿಯಲ್ಲಿ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟ ನಂತರ ಮಾತನಾಡುತ್ತಿದ್ದರು. ಮೊದಲು ನಾವು ನಮ್ಮ ನಮ್ಮ ಸಹಿಯನ್ನು ಕನ್ನಡದಲ್ಲಿ ಮಾಡುವ ಮೂಲಕ ಕನ್ನಡವನ್ನು ಉಳಿಸಲು ಇಂತಹ ವೇದಿಕೆಯ ಮೂಲಕ ಆಚರಣೆಗೆ ತರಬೇಕು. ಇದು ಕನ್ನಡದ ಉಳುವಿಗೆ ಒಂದು ಹೆಜ್ಜೆ. ಇಂದು ಕನ್ನಡದ ಬಗ್ಗೆ ಎಲ್ಲರು ಉದಾಸೀನ ಮನೋಭಾವ ತಾಳುತ್ತಿರುವುದರಿಂದ ನಮ್ಮ ಭಾಷೆ ಉಳಿವು ಆತಂಕದಲ್ಲಿದೆ. ವ್ಯಾವಹಾರಿಕ ನಿಟ್ಟಿನಲ್ಲಿ ಅನ್ಯಭಾಷೆಗಳು ಇರಲಿ, ಆದರೆ ಕನ್ನಡಕ್ಕೆ ಆದ್ಯತೆಯಿರಲಿ ಎಂದರು.
ನಿರ್ಣಯ ಮಂಡನೆ: ನಂತರ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯನವರು
ಪರಿಷತ್ ಕೈಗೊಂಡ 8 ನಿರ್ಣಯಗಳನ್ನು ವೇದಿಕೆಯಲ್ಲಿ ಮಂಡನೆ ಮಾಡಿದರು.
ಅವುಗಳು 1.ಜಿಲ್ಲಾಸಾಹಿತ್ಯ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಪ್ರತಿ ತಾಲೂಕುಗಳಲ್ಲಿ ಕನ್ನಡಭವನ ನಿರ್ಮಾಣಕ್ಕೆ ಒತ್ತುನೀಡುವುದು. 2.ಗ್ರಾಮೀಣ ಸಂಸ್ಕೃತಿಯನ್ನು ಉಳಿಸಲು ಅಗತ್ಯ ಕ್ರಮಕೈಗೊಳ್ಳುವುದು. 3 ತಾಲೂಕಿನಲ್ಲಿರುವ ಪರಿಸರ ಸಂರಕ್ಷಣೆಗೆ ಕ್ರಮಕೈಗೊಳ್ಳುವುದು. 4.ಗುಡಿಕೈಗಾರಿಕೆಗಳ ಉಳುವಿಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. 5.ಕನ್ನಡ ಶಾಲೆಗಳನ್ನು ಹಾಜರಾತಿ ಕೊರತೆಯ ನೆಪವೊಡ್ಡಿ ಮುಚ್ಚದಂತೆ ಎಚ್ಚರ ವಹಿಸುವುದು. 6.ಸಮ್ಮೇಳನಕ್ಕೆ ಸರ್ಕಾರದ ಅನುದಾನ ಹೆಚ್ಚಿಸಬೇಕು.  7. ಜಿಲ್ಲೆಗೆ ನೀರಾವರಿ ಯೋಜನೆ ಜಾರಿಗೆ ಸರ್ಕಾರ ಕ್ರಮಕೈಗೊಳ್ಳುವಂತೆ ಒತ್ತಾಯಿಸುವುದು. ಈ ಬೇಡಿಕೆಗಳನ್ನು ವೇದಿಕೆಯಲ್ಲಿ ಮಂಡಿಸಿದಾಗ, ರಾಜ್ಯ ಜೆಡಿಎಸ್ ಪ್ರಾಧಾನ ಕಾರ್ಯದರ್ಶಿ
ರಮೇಶ್‌ಬಾಬು ಅವರು ಇದಕ್ಕೆ ಇನ್ನೊಂದು ವಿಷಯ ಅಗತ್ಯವಾಗಿ ಸೇರ್ಪಡೆಯಾಗಬೇಕಿದೆ, ಜಿಲ್ಲೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಅದು ತಾಲೂಕಿನಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡುವುದು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಗೊಂಡಂತೆ ಪ್ರತಿ ತಾಲೂಕು ಸಂಪರ್ಕಕ್ಕೊಳಪಡುವಂತೆ ರೈಲು ಮಾರ್ಗ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಮನವಿ ಮಾಡಿದಾಗ ಸಭೆ ಅದನ್ನು ಒಪ್ಪಿ ಅಂಗೀಕರಿಸಿತು.
ಕಲೆಗೆ ಬರವಿಲ್ಲ: ನಂತರ ಮಾತನಾಡಿದ ಶಾಸಕ ಸಿ.ಬಿ.ಸುರೇಶ್‌ಬಾಬು ಅವರು ತಾಲೂಕಿನಲ್ಲಿ ಕಲೆ, ಸಂಸ್ಕೃತಿಗೆ ಬರವಿಲ್ಲ. ಇಲ್ಲಿ ಯಾವುದೇ ಕಾಯಕ್ರಮ ನಡೆದರು ನಮ್ಮ ಸಹಕಾರ ಮತ್ತು ಸಹಾಯ ಸದಾ ಇರುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿ. ನಾವು ನಮ್ಮ ಸಹಾಯ ಹಸ್ತ ನೀಡಲು ಸಿದ್ಧರಿದ್ದೇವೆ. ತೀನಂಶ್ರೀ ಭವನವನ್ನು ಅತಿ ಶೀಘ್ರದಲ್ಲಿ ನಿರ್ಮಿಸಿ ಅದರ ನಿರ್ವಹಣೆಯನ್ನು ಕಸಾಪಕ್ಕೆ ವಹಿಸಲು ಪ್ರಯತ್ನ ನನ್ನ ಕಡೆಯಿಂದ ಸಾಗಿದೆ. ಆದ್ದರಿಂದ ತಾಲೂಕಿಗೆ ಮತ್ತೊಂದು ಕನ್ನಡ ಭವನ ಬೇಡ ಎಂದರು.
1 ಲಕ್ಷ ನೀಡಲು ಸಿದ್ಧ: ಸಮ್ಮೇಳನಾಧ್ಯಕ್ಷರಾದ ಸಿ.ಹೆಚ್‌ಮರಿದೇವರು ಮಾತನಾಡಿ ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ನಾನು 1 ಲಕ್ಷ ದೇಣಿಗೆ ನೀಡಲು ಸಿದ್ಧನಿದ್ದೇನೆ ಎಂದು ಘೋಷಿಸಿದರು.
ನಂತರ ಕೆಂಕೆರೆ ಮಲ್ಲಿಕಾರ್ಜುನ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಸಮ್ಮೇಳನದ ಪ್ರೇಕ್ಷಕರಿಗೆ ಮುದನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement