ನಿವೃತ್ತ ಪೊಲೀಸ್ ಕುಟುಂಬಕ್ಕೆ ಆರೋಗ್ಯ ಭಾಗ್ಯ ಯೋಜನೆ
ಕ.ಪ್ರ.ವಾರ್ತೆ , ತುಮಕೂರು , ಜು.1
ನಿವೃತ್ತ ಪೊಲೀಸ್ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಭಾಗ್ಯ ಯೋಜನೆ ಸೇವಾನಿರತ ಪೊಲೀಸರಿಗೆ ಇರುವಂತೆ ವಿಸ್ತರಿಸುವಂತೆ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಸರ್ವ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ತುಮಕೂರು ನಗರದ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ನಿವೃತ್ತ ಎಸ್.ಪಿ ಎಂ.ಎ ಅಪ್ಪಯ್ಯ ವಹಿಸಿದ್ದರು.
ಈ ಸಭೆಯಲ್ಲಿ ಈ ಯೋಜನೆಯನ್ನು ಗುಜರಾತ್ ಮಾದರಿಯಲ್ಲಿ ಜಾರಿ ಮಾಡುವುದಾಗಿ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಸದಾನಂದ ಗೌಡರು ಆಶ್ವಾಸನೆ ನೀಡಿದ್ದರು. ಆಶ್ವಾಸನೆಯಾಗಿಯೇ ಉಳಿದಿದೆ. ಪ್ರಸ್ತುತ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ನಿವೃತ್ತ ಪೊಲೀಸರ ಮೇಲೆ ಕೃಪೆ ತೋರಿ ಯೋಜನೆ ಜಾರಿ ಮಾಡಲು ಆದೇಶ ಮಾಡಬೇಕೆಂದು ಒತ್ತಾಯಿಸಲಾಯಿತು.
ಈ ಬಗ್ಗೆ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಡಿ.ಜಿ.ಪಿಗೆ ಕಳುಹಿಸಿಕೊಡಲಾಗಿದೆ. ಈಗಲೂ ಸಹ ನಿವೃತ್ತ ಪೊಲೀಸರ ಪಟ್ಟಿಯನ್ನು ಕ್ರೋಡೀಕರಿಸಿ ಎಲ್ಲಾ ಜಿಲ್ಲೆಯ ಎಸ್ಪಿಗಳು ಹಾಗೂ ಘಟಕಾಧಿಕಾರಿಗಳು ಒಂದು ವಾರದೊಳಗೆ ಪ್ರಧಾನ ಕಚೇರಿಯ ಬಿ.ಎಫ್. ಶಾಖೆಗೆ ಒದಗಿಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಈ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳ ಎಸ್.ಪಿ ಮತ್ತು ಘಟಕಾಧಿಕಾರಿಗಳು ಕೂಡಲೆ ನಿವೃತ್ತ ಪೊಲೀಸರ ಪಟ್ಟಿಯನ್ನು ಕಳುಹಿಸಿಕೊಡಲು ಸಹ ಸಭೆಯಲ್ಲಿ ಒತ್ತಾಯಿಸಲಾಯಿತು.