ಬಜೆಟ್‌ನಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ
ಕ.ಪ್ರ.ವಾರ್ತೆ , ತುಮಕೂರು , ಜು.1
ರಾಜ್ಯ ಸರಕಾರ ಮಂಡಿಸುವ ಈ ಸಾಲಿನ ಬಜೆಟ್‌ನಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾಧರಣಿ ಹಮ್ಮಿಕೊಳ್ಳಲಾಗಿತ್ತು.
ಸಿಪಿಐ ರಾಜ್ಯ ಸಮಿತಿಯ ಆದೇಶದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಸಿಪಿಐ ಕಾರ್ಯಕರ್ತರು ಮುಂಬರುವ ಬಜೆಟ್‌ನಲ್ಲಿ ದುಡಿಯುವ ಜನರು, ಕೂಲಿಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಬಡ ವರ್ಗದವರಿಗೆ ಪಾಲು ದೊರೆಯುವಂತೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಣ ಮೀಸಲಿಡುತ್ತಿಲ್ಲ: ಪ್ರತಿಭಟನಾ ಧರಣಿ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಸರಕಾರದ ಬಜೆಟ್‌ನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದವರಿಗೆ, ವಿದ್ಯಾರ್ಥಿಗಳಿಗೆ, ರೈತ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಡುತ್ತಿಲ್ಲ. ಇದರಿಂದ ಇಂದಿನ ಬೆಲೆ ಹೆಚ್ಚಳದಲ್ಲಿ ಜೀವನ ನಡೆಸಲಾಗದೆ ತೊಂದರೆಗೀಡಾಗಿದ್ದಾರೆ. ಆದ್ದರಿಂದ ನೂತನ ಸರಕಾರವು ಜನತೆಗಾಗಿ ಅನುಕೂಲವಾಗುವಂತೆ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರಲು ಸಾಮಾಜಿಕ ನ್ಯಾಯವನ್ನು ಸಚಿವಾಲಯ ಘೋಷಿಸಬೇಕು. ರಾಜ್ಯ ಸರಕಾರ ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕನ್ನು ನೀಡಿ ಮನೆಗಳನ್ನು ನಿರ್ಮಿಸಿಕೊಡಲು ಬಜೆಟ್‌ನಲ್ಲಿ ಘೋಷಿಸಿ ದುಡಿಯುವ ಕಾರ್ಮಿಕ ವರ್ಗದವರಿಗೆ ಸಹಕರಿಸಲು ಮುಂದಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಅನ್ಯಾಯ: ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ ಮಾತನಾಡಿ ದಿನಗಟ್ಟಲೆ ದುಡಿಯುವಂತಹ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದರೂ ಅವುಗಳನ್ನು ಬಗೆಹರಿಸಲು ಮುಂದಾಗಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳಾಗಲಿ,ಸೌಲಭ್ಯಗಳಾಗಲಿ, ಚಿಕಿತ್ಸೆಯಾಗಲಿ ದೊರೆಯುತ್ತಿಲ್ಲ. ಗ್ಯಾಸ್ ಸಬ್ಸಿಡಿ ಪಡೆಯಲು ಅನುಕೂಲವಾಗುವಂತೆ ಹೆಚ್ಚಿನ ಆಧಾರ ನೋಂದಣಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಸಹಕಾರ್ಯದರ್ಶಿ ಗಿರೀಶ್ ಮಾತನಾಡಿ, ನೂತನ ಸರಕಾರ ರಚನೆಯಾಗಿ ತಿಂಗಳುಗಳೇ ಕಳೆದಿದ್ದರೂ ಮುಖ್ಯಮಂತ್ರಿಗಳು ಅಗ್ಗದ ದರದಲ್ಲಿ ಅಕ್ಕಿ ವಿತರಣೆ, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣೆ ಯೋಜನೆ ಜಾರಿಗೆ ಬಂದಿಲ್ಲ. ಕೂಡಲೇ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ 60 ವರ್ಷ ತುಂಬಿದ ಎಲ್ಲಾ ಬಡ ರೈತರಿಗೆ 3 ಸಾವಿರ ರು. ಮಾಸಿಕ ಪಿಂಚಣಿ ನೀಡಬೇಕು. ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಬೊಕ್ಕಸಕ್ಕೆ ಉಂಟಾದ 16.185 ಕೋಟಿ ರುಗಳ ನಷ್ಟವನ್ನು ಅಧಿಕಾರಿಗಳಿಂದ ವಸೂಲಿ ಮಾಡುವ ಕಟ್ಟು ನಿಟ್ಟಿನ ಕಾನೂನನ್ನು ರಚಿಸಬೇಕೆಂಬ ವಿವಿಧ ಬೇಡಿಕಗಳನ್ನು ಒಳಗೊಂಡ ಮನವಿಯನ್ನು ಶಾಸಕ ಡಾ.ರಫೀಕ್ ಅಹಮದ್ ಮತ್ತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ನೀಡಿದರು. ಮನವಿ ಸ್ವೀಕರಿಸಿದ ಶಾಸಕ ಡಾ. ರಫೀಕ್ ಅಹಮದ್ ರಾಜ್ಯದಲ್ಲಿ ಮಂಡನೆಯಾಗುವ ಬಜೆಟ್ ಅಧಿವೇಶನದಲ್ಲಿ ನೀವು ಕೊಟ್ಟಂತಹ 10 ಬೇಡಿಕೆಗಳನ್ನು ಸೇರಿಸುವಂತೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.