ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೈತರೇ ಬ್ಯಾಂಕ್ ಸಾಲ ಮರು ಪಾವತಿಸದಿರಿ

Vishwanath S
Updated On : 2 Jul 2013, 1:08 am

ಕ.ಪ್ರ.ವಾರ್ತೆ ,  ತುರುವೇಕೆರೆ ,  ಜು.1
ರೈತರೇ ತಾವು ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆದಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಮರು ಪಾವತಿ ಮಾಡಲೇ ಬೇಡಿ. ಅದು ಏನಾಗುತ್ತೋ ನೋಡೇ ಬಿಡೋಣ. ಯಾವುದೇ ಅಧಿಕಾರಿಗಳ, ರಾಜಕಾರಣಿಗಳ ಬೆದರಿಕೆಗೆ ಹೆದರಲೇ ಬೇಡಿ. ಮುಲಾಜಿಲ್ಲದೇ ಸಾಲ ಪಾವತಿ ಮಾಡೋದೇ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿ...
ಹೀಗೆಂದು ಫಾರ್ಮಾನು ಹೊರಡಿಸಿದವರು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ್. ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ತೆಂಗು ಮತ್ತು ಅಡಿಕೆ ಮರಗಳ ರೋಗ ಪರಿಹಾರಕ್ಕಾಗಿ ಒತ್ತಾಯಿಸಿ ರಸ್ತೆ ತಡೆ ಹಾಗೂ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ ಚುನಾವಣಾ ವೇಳೆ ಎಲ್ಲಾ ಪಕ್ಷಗಳು ರೈತರ ಪರವಾಗಿ ಮಾತನಾಡಿದ್ದೇ ಮಾತನಾಡಿದ್ದು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಬದುಕನ್ನು ಸುಧಾರಿಸಿ ಬಿಡುವ ಭರವಸೆ ನೀಡಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೊಡನೇ ರೈತರು ಪಡೆದಿರುವ ಸಾಲದ ವಸೂಲಾತಿಗಾಗಿ ಮುಂದಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬರ ಬಂದು ಕೋಟ್ಯಾಂತರ ತೆಂಗು ಹಾಗೂ ಅಡಿಕೆ ಮರಗಳು ಹಾಳಾಗಿವೆ. ಬೆಳೆಗೆ ನೀರಿಲ್ಲದೇ ಬೆಳೆಗಳೂ ಸಹ ಕಡಿಮೆ ಬಂದಿವೆ. ಸುಳಿ ಮುರಿದು ಹಾಳಾಗಿರುವ ಪ್ರತಿ ತೆಂಗಿಗೆ ಮುಂದಿನ 25 ವರ್ಷಗಳ ದೃಷ್ಟಿಕೋನದಿಂದ ತಲಾ 25 ಸಾವಿರ ರು.ಗಳ ಪರಿಹಾರ, ಪ್ರತಿ ಅಡಿಕೆ ಮರಕ್ಕೆ 15 ಸಾವಿರ ರು.ಗಳ ಪರಿಹಾರ ನೀಡಬೇಕು ಎಂದು ಗಂಗಾಧರ್ ಆಗ್ರಹಿಸಿದರು.
ಖಂಡನೀಯ: ತೀರ ವಿಷಮ ಸ್ಥಿತಿಯಲ್ಲಿರುವ ರೈತರಿಂದ ಸಾಲ ವಸೂಲು ಮಾಡುವ ಸಲುವಾಗಿ ರೈತರ ಮನೆ ಜಮೀನುಗಳನ್ನು ಜಪ್ತಿ ಮಾಡಲು ಮುಂದಾಗಿರುವ ಕ್ರಮ ಖಂಡನೀಯ. ತುಮಕೂರು ಜಿಲ್ಲಾ ಕೇಂದ್ರೀಯ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ ರೈತನ ಮನೆಯನ್ನು ಹಾಗೂ ಜಮೀನನ್ನು ಜಪ್ತಿ ಮಾಡುವ ಸಲುವಾಗಿ ಕೇಂದ್ರ ಬ್ಯಾಂಕ್ ಸೂಚನೆ ನೀಡಿದೆ. ಈ ಕುರಿತು ಜಿಲ್ಲಾ ಬ್ಯಾಕ್ ಅಧ್ಯಕ್ಷ ರಾಜಣ್ಣನವರನ್ನು ವಿವರ ಕೇಳುವ ಸಂದರ್ಭದಲ್ಲಿ ಬಹಳ ಕಠೋರವಾಗಿ ವರ್ತಿಸಿದ್ದಾರೆ. ಇವರ ವರ್ತನೆ ವಿರುದ್ಧ ಹಾಗೂ ಬ್ಯಾಂಕ್‌ನ ಕ್ರಮದ ವಿರುದ್ಧ ಇದೇ ತಿಂಗಳ 13 ರಂದು ಬ್ಯಾಂಕ್ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಂಗಾಧರ್ ತಿಳಿಸಿದರು.
ತೆಂಗು- ಅಡಿಕೆ ಹಾಳು:  ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಯಲ್ಲಿ ಬರಕ್ಕೆ ಸಿಲುಕಿ ಕೋಟ್ಯಂತರ ತೆಂಗಿನ ಮರಗಳು ಹಾಗೂ ಅಡಿಕೆ ಮರಗಳು ಹಾಳಾಗಿ ಹೋಗಿವೆ. ಕನಿಷ್ಠ 5 ಸಾವಿರ ಕೋಟಿಯಷ್ಟು ಬೆಳೆ ನಷ್ಟವಾಗಿದೆ. ರೈತರ ಬದುಕು ಬೀದಿಗೆ ಬಿದ್ದಿದೆ. ತೆಂಗು ಹಾಗೂ ಅಡಿಕೆಯನ್ನೇ ನಂಬಿಕೊಂಡಿದ್ದ ರೈತರ ಬಾಳು ಗಾಳಿಪಟದಂತಾಗಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಆಯೋಗವನ್ನು ರಚನೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ನ್ಯಾಫೆಡ್‌ನಲ್ಲಿ ಕೊಬರಿ ಬಿಡುವ ರೈತರಿಗೆ ಕೇವಲ 3 ದಿನದಲ್ಲೇ ಹಣ ನೀಡುವ ಮಾತುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆದರೆ ಅದು ಸುಳ್ಳಾಗಿದೆ. ಹತ್ತಾರು ದಿನಗಳು ಕಳೆದರೂ ಸಹ ರೈತರಿಗೆ ಹಣ ದೊರೆಯುತ್ತಿಲ್ಲ ಎಂದು ಗೋವಿಂದರಾಜು ಆರೋಪಿಸಿದರು.  ತಾಲೂಕು ಅಧ್ಯಕ್ಷ ಮೇಲನಹಳ್ಳಿ ಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ದೇವರಾಜು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಹಾಜರಿದ್ದರು. ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ರೈತರು ಪ್ರತಿಭಟನಾ ಮೆರವಣಿಗೆ ಮಾಡಿದರು. ತಾಲೂಕು ದಂಡಾಧಿಕಾರಿ ಜಿ.ಪಿ.ಮಂಜೇಗೌಡರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement