ಸರ್ವ ಧರ್ಮ ಸಮನ್ವಯತೆ ಕಾಪಾಡುವುದೇ ನಮ್ಮ ಸರ್ಕಾರದ ಗುರಿ: ಟಿ.ಬಿ. ಜಯಚಂದ್ರ
ಶಿರಾ: ಸರ್ವ ಧರ್ಮ ಸಮನ್ವಯತೆ ಕಾಪಾಡುವುದೇ ನಮ್ಮ ಸರ್ಕಾರದ ಗುರಿಯಾಗಿದ್ದು ಜನರಿಗೆ ನಿರಾಸೆ ಆಗದ ರೀತಿಯಲ್ಲಿ ಕೆಲಸ ಮಾಡಿ ಜನರ ಋಣ ತೀರಿಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ಪಟ್ಟಣದ ಚಂಗಾವರ ರಸ್ತೆಯಲ್ಲಿರುವ ಸಂತ ಜೋಸೆಫ್ ಚರ್ಚ್‌ನ ವಾರ್ಷೀಕೋತ್ಸವ ಮತ್ತು ಸಚಿವರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಶಿರಾ ಕ್ಷೇತ್ರದಲ್ಲಿ ನಾನು ಸತತವಾಗಿ ಎರಡು ಭಾರಿ ಗೆದ್ದು ಕ್ಷೇತ್ರದಲ್ಲಿ ಎರಡನೇ ಬಾರಿ ಯಾರೂ ಗೆಲ್ಲುವುದಿಲ್ಲ ಎಂಬ ಮೂಢ ನಂಭಿಕೆಯನ್ನು ಅಳಿಸಿ ಹಾಕಿದ್ದೇನೆ ಎಂದರು. ತಾಲೂಕಿನಲ್ಲಿ ಕುಡಿಯುವ ನೀರು ದಿನದ 24 ಗಂಟೆಯೂ ದೊರೆಯುವಂತೆ ಮಾಡಬೇಕು ಎಂಬುದು ನನ್ನ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯ ಮಾಡುತ್ತೇನೆ. ದೇವರು ಒಬ್ಬನೆ, ನಾಮ ಹಲವು. ಎಲ್ಲ ಧರ್ಮಗಳು ಒಂದೇ ಗುರಿಯತ್ತ ಸಾಗುವ ಹಲವು ಮಾರ್ಗಗಳು. ನಾನು ಏಸುವಿನ ಬೋಧನೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಸಮಾಜ ಸೇವೆ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಚರ್ಚ್‌ನ ಧರ್ಮಗುರುಗಳಾದ ಡೇವಿಡ್ ಜೋಸೆಫ್ ಸಚಿವರನ್ನು ಸನ್ಮಾನಿಸಿ ಆರ್ಶೀವದಿಸಿದರು. ಎಸ್.ಎನ್.ಕೃಷ್ಣಯ್ಯ, ನಗರಸಭಾ ಸದಸ್ಯ ರಾಜಣ್ಣ, ಪಿ.ಆರ್.ರಮೇಶ್ ಮತ್ತಿತರರು ಹಾಜರಿದ್ದರು.