ನಫೆಡ್ ಕೇಂದ್ರದಲ್ಲಿ ಮತ್ತೊಂದು ಕೌಂಟರ್ ತೆರೆಯಲು ಆಗ್ರಹ
ಹುಳಿಯಾರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಸರ್ಕಾರ ನಫೆಡ್ ಕೇಂದ್ರವನ್ನು ಸ್ಥಾಪಿಸಿ, ರೈತರಿಂದ ಕೊಬ್ಬರಿ ಖರೀದಿಗೆ ಮಾಡುತ್ತಿದೆ. ಆದರೆ ಈಗ ಸರ್ಕಾರ ತೆರೆದಿರುವ ಕೊಬ್ಬರಿ ಖರೀದಿ ಕೌಂಟರ್ನ ಜೊತೆ ಮತ್ತೊಂದು ಉಪ ಕೌಂಟರ್ ತೆರೆಯುವಂತೆ ಹುಳಿಯಾರು ಹಾಗೂ ಸುತ್ತಮುತ್ತಲ ರೈತರ ಆಗ್ರಹಿಸಿದ್ದಾರೆ.
ಕೊಬ್ಬರಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದ ಬೆಳೆಗಾರರು ಸರ್ಕಾರ ನಫೆಡ್ ಕೇಂದ್ರವನ್ನು ಸ್ಥಾಪಿಸಿ ಕೊಬ್ಬರಿ ಕೊಳ್ಳಲು ಮುಂದಾಗಿ, ಕೊಬ್ಬರಿ ಖರೀದಿ ಮಾಡುತ್ತಿರುವುದು ಸಂತಸ ತಂದಿದ್ದರೂ ಸಹ ಖರೀದಿ ಕೇಂದ್ರಕ್ಕೆ ಕೊಬ್ಬರಿ ಬಿಡಲು ರೈತರು ಸಂಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಅನುಕೂಲವಾಗುವಂತೆ ಹುಳಿಯಾರು ಹಾಗೂ ಚಿ.ನಾ.ಹಳ್ಳಿಯಲ್ಲಿ ನಫೆಡ್ ಖರೀದಿ ಕೇಂದ್ರವನ್ನು ತೆರೆದಿದೆ. ಕೊಬ್ಬರಿಯನ್ನು ಕೇಂದ್ರಕ್ಕೆ ತರುವ ಮೊದಲು ನಫೆಡ್ ಅಧಿಕಾರಿಗಳ ಹತ್ತಿರ ದಿನಾಂಕವನ್ನು ದಾಖಲಿಸಿ ನಂತರ ಕೊಬ್ಬರಿಯನ್ನು ತರಬೇಕಿದೆ. ಈಗಾಗಲೇ ಸೆಪ್ಟೆಂಬರ್ವರೆಗೆ ದಿನಾಂಕವನ್ನು ಮುಂಗಡವಾಗಿ ಗೊತ್ತು ಮಾಡಲಾಗಿದೆ. ಆದರೆ ಹುಳಿಯಾರು ಭಾಗದಲ್ಲಿ ಅಧಿಕ ತೆಂಗು ಬೆಳೆಗಾರರಿರುವುದರಿಂದ ಖರೀದಿ ಕೇಂದ್ರಕ್ಕೆ ಅಧಿಕ ಕೊಬ್ಬರಿ ಬರುತ್ತಿದ್ದು ರೈತರು ತಾವು ತಂದ ಕೊಬ್ಬರಿಯನ್ನು ಮಾರಲು ಕೇಂದ್ರದ ಮುಂದೆ ರಾಶಿ ಹಾಕಿ, ಸಂಜೆವರೆವಿಗೂ ಕಾಯುವಂತಾಗಿದೆ. ಇದನ್ನು ಮನಗಂಡ ನಫೆಡ್ ಅಧಿಕಾರಿಗಳು ಈಗಿರುವ ಕೌಂಟರ್ ಜೊತೆ ಮತ್ತೊಂದು ಕೌಂಟರ್ ತೆರೆದು ಕೊಬ್ಬರಿ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.