ಶಾಸಕರ ನೇತೃತ್ವದಲ್ಲಿ ದೇಣಿಗೆ ಸಂಗ್ರಹ
ಕ.ಪ್ರ. ವಾರ್ತೆ , ಕೊರಟಗೆರೆ , ಜು.2
ಉತ್ತರಖಂಡ ರಾಜ್ಯದಲ್ಲಿ ಆದ ಭೀಕರ ಜನಪ್ರಳಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನಿಧಿಯನ್ನು ತಾಲೂಕಿನ ವಿವಿಧ ಮಠಾದೀಶರೊಂದಿಗೆ ಶಾಸಕ ಪಿ.ಆರ್. ಸುಧಾಕರಲಾಲ್ ನೇತೃತ್ವದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.
ದೇಶದಲ್ಲಿ ಹಿಂದೆಂದೂ ಕಾಣದಂತಹ ಜಲಪ್ರಳಯ ಉತ್ತರಖಂಡದಲ್ಲಿ ನಡೆದು ಅಲ್ಲಿ ಅಪಾರ ಜೀವಹಾನಿ ನೂರಾರು ಸಾದು ಸಂತರ ದುರ್ಮರಣ, ಜನಜೀವನ ಅಸ್ಥವ್ಯಸ್ತವಾಗಿ ಸಂಕಷ್ಟದಲ್ಲಿರುವ ದೇಶ ವಾಸಿಗಳ ಸಹಕಾರಕ್ಕಾಗಿ ಕೊರಟಗೆರೆ ಕ್ಷೇತ್ರದ ಶಾಸಕ ಪಿ.ಆರ್.ಸುಧಾಕರಲಾಲ್, ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಹನುಮಂತನಾಥ ಸ್ವಾಮೀಜಿ ಮತ್ತು ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಸುಕ್ಷೇತ್ರ ತಿಮ್ಮಪ್ಪಮಠದ ಬಸವಮಹಾಲಿಂಗ ಸ್ವಾಮೀಜಿಗಳು ಸೇರಿದಂತೆ ಸಂತ್ರಸ್ಥ ಪರಿಹರ ಸಮಿತಿ ಪದಾಧಿಕಾರಿಗಳೊಂದಿಗೆ ಕೊರಟಗೆರೆ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ನೆರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ಪರಿಹಾರ ನಿಧಿ ಸಂಗ್ರಹಕ್ಕೆ ಶಾಸಕ ಸುಧಾಕರಲಾಲ್ ಚಾಲನೆ ನೀಡಿ ನಂತರ ಪಟ್ಟಣದ ಬೀದಿಗಳಲ್ಲಿ ಪ್ರತಿ ಅಂಗಡಿ, ಮನೆಗಳಿಗೆ ತೆರಳಿ ಉತ್ತರಖಂಡದ ಜನರ ಪರಿಸ್ಥಿತಿ ಬಗ್ಗೆ ತಿಳಿಸಿ ಸಾರ್ವಜನಿಕರಿಂದ ಪರಿಹಾರ ನಿಧಿಯನ್ನು ಸಂಗ್ರಹಿಸಲಾಯಿತು. ನಿಧಿಗೆ ಸ್ವಾಮಿ ವಿವೇಕಾಣನಂದ ರಥಯತ್ರೆ ಸಮಿತಿ ವತಿಯಿಂದ 10,101 ರು.ಗಳನ್ನು, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರು ಒಟ್ಟಿಗೆ 25 ಸಾವಿರ ರು.ಗಳನ್ನು ನೀಡಿದರು. ಇದೇ ರೀತಿ ಮಧುಗಿರಿ ಪಟ್ಟಣದಲ್ಲಿ ಸಿದ್ದರ ಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸಂತ್ರಸ್ಥರಿಗಾಗಿ ಸಂಗ್ರಹಿಸಿದ ನಿಧಿಗೆ ಮಧುಗಿರಿ ಪುರಸಭಾ ನೌಕರರು ತಮ್ಮ ಒಂದು ದಿನದ ವೇತನದ ಮೊತ್ತ 45 ಸಾವಿರ ರು. ಸೇರಿದಂತೆ ಮಧುಗಿರಿ ಪಟ್ಟಣದಲ್ಲಿ ಒಟ್ಟು 1.50 ಲಕ್ಷ ರು. ಸಂಗ್ರಹವಾಗಿದೆ. ನಿಧಿ ಸಂಗ್ರಹದ ಪಾದಯಾತ್ರೆಯಲ್ಲಿ ಮುಖಂಡರಾದ ಜೆ.ನರಸಿಂಹರಾಜು, ರಂಗಮುತ್ತಯ್ಯ, ಎಲ್.ರಾಜಣ್ಣ, ಮಹಾಲಿಂಗಪ್ಪ, ಲಕ್ಷ್ಮಣ್, ಪ.ಪಂ.ಸದಸ್ಯ ಕೆ.ಎಲ್. ಆನಂದ್, ತಾ.ಪಂ.ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದರು.