ಅನುಪಯುಕ್ತ ಕೊಳವೆ ಬಾವಿಗಳ ಮಾಹಿತಿ ನೀಡಿ
ತುಮಕೂರು: ಕೊರೆದು ಮುಚ್ಚದೆ ಬಿಟ್ಟಿರುವ ಅನುಪಯುಕ್ತ ಕೊಳವೆಬಾವಿಗಳ ಮಾಹಿತಿಯನ್ನು ಮತ್ತು ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ಮಧುಗಿರಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಮಧುಗಿರಿ ಉಪವಿಭಾಗದ ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕಿನ ಸಾರ್ವಜನಿಕರು ತಮ್ಮ ಗ್ರಾಮ ಅಥವಾ ಜಮೀನು ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಕೊಳವೆ ಬಾವಿಯನ್ನು ಕೊರೆದು ಅದು ವಿಫಲವಾಗಿದ್ದರೆ ಅದನ್ನು ಮುಚ್ಚದೆ ಬಿಟ್ಟಿದ್ದಲ್ಲಿ ಮತ್ತು ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಅಥವಾ ಜಮೀನಿನಲ್ಲಿ ಮಳೆ, ಗಾಳಿ ಮತ್ತು ಇತರೆ ಯಾವುದೇ ಕಾರಣದಿಂದ ಬಿದ್ದಿರುವ ವಿದ್ಯುತ್ ಕಂಬಗಳು ಕಂಡು ಬಂದಲ್ಲಿ ಮಾಹಿತಿಯನ್ನು ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಕೂಡಲೇ ತಿಳಿಸಬೇಕಾಗಿ ಅವರು ಸೂಚಿಸಿದ್ದಾರೆ.
ಇಂದು ಉಪನ್ಯಾಸ
ಪರಂಪರಾ ಪ್ರತಿಷ್ಠಾನ, ತುಮಕೂರು, ತುಮಕೂರು ವಿಜ್ಞಾನ ಕೇಂದ್ರ (ರಿ), ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜು, ತುಮಕೂರು ವತಿಯಿಂದ ಜುಲೈ 7 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಸಿದ್ದಗಂಗಾ ಮಹಿಳಾ ಪ.ಪೂ.ಕಾಲೇಜು ಸಭಾಂಗಣ, ತುಮಕೂರು ಇಲ್ಲಿ ಮಧುಮೇಹ-ಹೃದಯ ರೋಗಗಳ ನಿಯಂತ್ರಣ ನಿಮ್ಮ ಕೈಯಲ್ಲಿ ಎಂಬ ಆಧುನಿಕ ಜೀವನ ಶೈಲಿ ರೋಗಗಳಾದ ಮಧುಮೇಹ, ಹೃದಯ ರೋಗಗಳಿಗೆ ಬಲಿಯಾಗುತ್ತಿರುವ ನಾಗರಿಕರಿಗೆ ವಿಶೇಷ ಆರೋಗ್ಯ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಖ್ಯಾತ ವಿಜ್ಞಾನಿ ಡಾ. ಖಾದರ್ ಇವರು ವಿಶೇಷ ಉಪನ್ಯಾಸಕರಾಗಿ ಭಾಗವಹಿಸುವರು. ಅತಿಥಿಗಳಾಗಿ ಬೆಂಗಳೂರಿನ ಜಲತಜ್ಞ ಡಾ. ಎಲ್. ಲಿಂಗರಾಜು ಅವರು ಆಗಮಿಸುವರು.
6 ಮಂದಿ ವಿರುದ್ಧ ಪ್ರಕರಣ ದಾಖಲು
ಪಾವಗಡ: ಜಮೀನಿನ ಮಾಲೀಕ ಜೋಗಪ್ಪ ಹಾಗೂ ಸಿದ್ದಪ್ಪ ಎಂಬುವರ ಮೇಲೆ ನಡೆಸಿದ ದೌರ್ಜನ್ಯ ಹಾಗೂ ಸಾವಿರಾರು ರು.ಮೌಲ್ಯದ ಹುಣಿಸೇ ಗಿಡನಾಶಕ್ಕೆ ಕಾರಣರಾದವರೆಂಬ ಆರೋಪದ ಹಿನ್ನೆಲೆಯಲ್ಲಿ ತಾ.ಬಿ.ವಡ್ಡರಹಟ್ಟಿ ಗ್ರಾಮದ ಶಿಕ್ಷಕರೊಬ್ಬರು ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ನೊಂದ ಸಿದ್ದಪ್ಪ ಎಂಬುವವರು ಪಾವಗಡ ಠಾಣೆಗೆ ದೂರು ನೀಡಿದ್ದು ದೂರನ್ನು ಪರಿಶೀಲಿಸಿ ಠಾಣಾ ಪಿಎಸ್ಐ ನಟರಾಜ್ ಶಿಕ್ಷಕ ಚಿಕ್ಕೇಗೌಡ ಸೇರಿದಂತೆ ಆತನ 6 ಮಂದಿ ಸಹಚರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅರ್ಜಿ ಆಹ್ವಾನ
ತುಮಕೂರು: 2013-14ನೇ ಸಾಲಿಗಾಗಿ ಒಂದನೆಯ ತರಗತಿಯಿಂದ ಅಂತಿಮ ವರ್ಷದ ಪದವಿ, ಡಿಪ್ಲೋಮಾವರೆಗೆ, ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯವೇತನ ಹಾಗೂ ಪಿಂಚಣಿ ಇಲ್ಲದ ರಾಜ್ಯದ ಹಾಗೂ ಪಿಂಚಣಿ ಪಡೆಯುತ್ತಿರುವ ಹೊರ ರಾಜ್ಯದ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಇಲ್ಲಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆ. 30 ರೊಳಗಾಗಿ ಸಲ್ಲಿಸುವುದು. ಮಾಹಿತಿಗೆ ದೂ.ವಾ.080-25588718 ಸಂಪರ್ಕಿಸಿ.
ದೂರವಾಣಿ ಅದಾಲತ್
ತುಮಕೂರು: ಬಿ.ಎಸ್.ಎನ್.ಎಲ್.ನ ತುಮಕೂರು ದೂರಸಂಪರ್ಕ ಮಹಾಪ್ರಬಂಧಕರ ಕಚೇರಿಯಲ್ಲಿ ಜುಲೈ 18 ರಂದು ಬೆಳಿಗ್ಗೆ 11 ಗಂಟೆಗೆ ದೂರವಾಣಿ ಅದಾಲತ್ ನಡೆಯಲಿದೆ. ಅದಾಲತ್ಗೆ ಅರ್ಜಿ ಸಲ್ಲಿಸುವ ಮೊದಲು ಕುಂದುಕೊರತೆ ನಿವಾರಣೆಗೆ ಎಲ್ಲಾ ಸಾಮಾನ್ಯ ಮಾರ್ಗಗಳನ್ನು ಕೈಗೊಂಡಿರಬೇಕು ಎಂದು ತಿಳಿಸಲಾಗಿದೆ.
ಹೃದಯಾಘಾತದಿಂದ ಮುಖ್ಯ ಶಿಕ್ಷಕ ಸಾವು
ತುಮಕೂರು: ತುಮಕೂರು ತಾಲೂಕು ಹೆಬ್ಬಾಕದ ರುದ್ರೇಶಯ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ದಿಬ್ಬೂರಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ನಿರ್ಮಲ ಭಾರತ ಅಭಿಯಾನ ಗ್ರಾಮಗಳ ಸ್ವಚ್ಛತೆಗೆ ವರದಾನ
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ನಿರ್ಮಲ ಭಾರತ ಅಭಿಯಾನ ಗ್ರಾಮಗಳ ಸ್ವಚ್ಛತೆಗೆ ವರದಾನವಾಗಿದೆ. ಈ ಅಭಿಯಾನದಲ್ಲಿ ಪ್ರತಿ ಮನೆಗೂ ಶೌಚಾಲಯ ಕಟ್ಟಿಕೊಳ್ಳಲು ಸರ್ಕಾರ ಆರ್ಥಿಕ ಸಹಾಯದ ಜೊತೆಗೆ ತಾಂತ್ರಿಕ ಸಹಾಯವನ್ನೂ ಒದಗಿಸುತ್ತಿದೆ. ಇದರಿಂದಾಗಿ ಗ್ರಾಮಗಳಲ್ಲಿ ಸ್ವಚ್ಛ ವಾತಾವರಣ ನಿರ್ಮಾಣವಾಗಿ ಗ್ರಾಮೀಣ ಜನರು ರೋಗ ಮುಕ್ತರಾಗಿ ಬದುಕಲು ಸಹಕಾರಿಯಾಗಿದೆ ಎಂದು ನಿರ್ಮಲ ಭಾರತ ಅಭಿಯಾನದ ಜಿಲ್ಲಾ ಸಂಯೋಜಕ ಟಿ. ಸತ್ಯನಾರಾಯಣ ಹೇಳಿದರು. ಅವರು ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಚಿತ್ರದುರ್ಗ, ತಾಪಂ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಶಿರಾ, ಗ್ರಾಪಂ ಬರಗೂರು ಇವರ ಸಂಯುಕ್ತ ಆಶ್ರಯದಲ್ಲಿ ದಾಸರಹಳ್ಳಿ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಲಾಗಿದ್ದ ನಿರ್ಮಲ ಭಾರತ ಅಭಿಯಾನ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮಗಳು ದೇಶದ ಜೀವನಾಡಿ. ಗ್ರಾಮೀಣ ಜನತೆಯ ಜೀವನಮಟ್ಟ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟದ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಗ್ರಾಮಗಳ ಅಭ್ಯುದಯಕ್ಕಾಗಿ ಸರ್ಕಾರ ಈ ಅಭಿಯಾನ ಜಾರಿಗೊಳಿಸಿದ್ದು, ಗ್ರಾಮಸ್ಥರು ಕೈಜೋಡಿಸಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗುವಂತೆ ಸಲಹೆ ನೀಡಿದರು. ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕು. ಬಯಲು ಮಲವಿಸರ್ಜನೆ ನಿಲ್ಲಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದರು. ಬರಗೂರು ಗ್ರಾಪಂ ಅಧ್ಯಕ್ಷೆ ಬಿ.ಆರ್.ಸುಮಿತ್ರಮ್ಮ ಸತೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ತಪ್ಪದೆ ಶೌಚಾಲಯ ಉಪಯೋಗಿಸುವದರ ಜೊತೆಗೆ ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಗ್ರಾಮವೆಲ್ಲಾ ಸ್ವಚ್ಛವಾಗಿರುತ್ತದೆ. ಇದರಿಂದಾಗಿ ನಮ್ಮನ್ನು ಕಾಡುವ ಹಲವಾರು ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹುದೆಂದರು. ಕ್ಷೇತ್ರಪ್ರಚಾರ ಸಹಾಯಕ ಎಸ್. ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಾಶಿವಮೂರ್ತಿಗೆ ಸಿದ್ಧಾರೂಢ ಪ್ರಶಸ್ತಿ
ತುಮಕೂರು: ತುಮಕೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಸಂಶೋಧನ ಕೇಂದ್ರದ ಮುಖ್ಯಸ್ಥ ಪ್ರೊ.ಪಿ. ಸದಾಶಿವಮೂರ್ತಿಯವರಿಗೆ ಸಿದ್ಧಾರೂಢ ಪ್ರಶಸ್ತಿ ಲಭಿಸಿದೆ. ಧಾರವಾಡ ಜಿಲ್ಲೆ ಕಣವಿ ಹೊನ್ನಾಪುರದ ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳ 176 ನೇ ಜಯಂತ್ಯುತ್ಸವ ನಿಮಿತ್ತ ಕನ್ನಡ ನಾಡಿನ ಗ್ರಂಥಾಲಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಪ್ರಯುಕ್ತ ಸಿದ್ಧಾರೂಢ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.