ಗ್ರಾ.ಪಂ. ಸದಸ್ಯರಿಗೂ ರು. 10 ಲಕ್ಷ ಅನುದಾನ ನೀಡಿ
ಕ.ಪ್ರ. ವಾರ್ತೆ , ತುಮಕೂರು , ಜು.6
ಗ್ರಾ.ಪಂ. ಸದಸ್ಯರಿಗೂ 10 ಲಕ್ಷ ರು. ಅನುದಾನ ನೀಡುವಂತೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಆಗ್ರಹಿಸಿದರು.
ಬೆಳಗುಂಬ ಗ್ರಾಮದಲ್ಲಿ ನಡೆದ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಸಭೆಗೂ ಮುನ್ನ ಬೆಳಗುಂಬ ತೋಟ ಮತ್ತು ತಾಂಡ್ಯಗಳಲ್ಲಿ ಸುವರ್ಣ ಗ್ರಾಮ ಯೋಜನೆಯಡಿ 60 ಲಕ್ಷ ರು. ಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಸಿಮೆಂಟ್ ಮೋರಿ ನಿರ್ಮಾಣದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ಮಾಡಿ ಮಾತನಾಡಿದ ಶಾಸಕರು ಕೆಲಸದಲ್ಲಿ ಗುಣಮಟ್ಟದ ಕಾಮಗಾರಿಯಾಗುವಂತೆ ಗ್ರಾಮಸ್ಥರು ಮತ್ತು ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ಕೆಲಸವನ್ನು ನೋಡಿಕೊಳ್ಳಬೇಕು ಎಂದರು. ಗುಣಮಟ್ಟ ಸರಿ ಇಲ್ಲ ಎಂದಾಗ ಕೆಲಸ ನಿಲ್ಲಿಸಿ ನನಗೆ ನೇರವಾಗಿ ದೂರವಾಣಿ ಕರೆ ಮಾಡಿ ತಿಳಿಸಿ ಎಂದು ಮನವಿ ಮಾಡಿದರು.
ಗ್ರಾಮ ಸ್ವರಾಜ್ಯ ಆಗಬೇಕು: ಗಾಂಧೀಜಿಯ ಕನಸು ನನಸು ಮಾಡುವ ದಿಕ್ಕಿನಲ್ಲಿ ಪಯಣ ಗ್ರಾಮ ರಾಜ್ಯದ ಕಲ್ಪನೆಯನ್ನು ಕಂಡು ರಾಷ್ಟ್ರದ ಉನ್ನತಿಗೆ ಶ್ರಮಿಸಿದ ಗಾಂಧೀಜಿಯವರ ಕನಸು ಗ್ರಾಮ ಸ್ವರಾಜ್ಯ ಆಗಬೇಕು ಎಂಬುದನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರ ಭಾಗವಾಗಿ ಮೊದಲನೇ ಗ್ರಾಮಸಭೆ ಬೆಳಗುಂಬದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇನ್ನು ಮುಂದೆ ಪ್ರತೀ ಗ್ರಾಮಪಂಚಾಯ್ತಿಯಲ್ಲೂ ಗ್ರಾಮಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಗ್ರಾಮಸಭೆಗೆ ಹಾಜರಾಗದ ಮತ್ತು ಓಣಿಸಭೆ ನಡೆಸದ ಪಂಚಾಯ್ತಿ ಸದಸ್ಯತ್ವ ರದ್ದು ಮಾಡುವ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.
ಎಲ್ಲರಿಗೂ ಕಾನೂನು ಒಂದೇ: ಗ್ರಾಮ ಪಂಚಾಯ್ತಿಗಳಿಗೆ ಪ್ರತ್ಯೇಕ ಕನಸು ಇದ್ದು ಇದನ್ನು ಯಾರೂ ಕೂಡ ಕಸಿಯುವಂತಾಗಬಾರದು ಎಂದು ತಿಳಿಸುತ್ತಾ ಚುನಾಯಿತ ಪ್ರತಿನಿಧಿಯಾಗಲು ಎಲ್ಲರಿಗೂ ಕಾನೂನು ಒಂದೇ ಎಂದರು.
ಅಧಿಕಾರ ವಿಕೇಂದ್ರಿಕರಣ ಮಾಡಿ ಗ್ರಾಮಗಳು ಸ್ವಾವಲಂಬನಾ ಜೀವನ ನಡೆಸಲು ಸಹಕಾರಿಯಾಗುವಂತೆ ಕಾನೂನು ರಚನೆ ಮಾಡಿ ಗ್ರಾಮ ಪಂಚಾಯ್ತಿಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಶಾಸಕರಿಗೆ, ಸಂಸದರಿಗೆ ಸ್ಥಳಿಯ ಪ್ರದೇಶಾಭಿವೃದ್ಧಿ ನಿಧಿ ನೀಡುವಂತೆ ಗ್ರಾಮ ಪಂಚಾಯ್ತಿ ಸದಸ್ಯರಿಗೂ ಸ್ಥಳೀಯ ಗ್ರಾಮಾಭಿವೃದ್ಧಿ ನಿಧಿ ವಾರ್ಷಿಕ 10 ಲಕ್ಷ ಅನುದಾನ ನೀಡಬೇಕು ಎಂದು ಶಾಸಕ ಬಿ. ಸುರೇಶ ಗೌಡರು ಸರ್ಕಾರವನ್ನು ಒತ್ತಾಯಿಸಿದರು. ಗ್ರಾಮಸಭೆಗಳಿಗೆ ಹೆಚ್ಚಿನ ಮಹತ್ವ ಇದ್ದು ಗ್ರಾಮಸಭೆಯಲ್ಲಿ ಬರುವ ಅರ್ಜಿಗಳಿಗೆ ತ್ವರಿತವಾಗಿ ಮತ್ತು ಪ್ರಥಮ ಆದ್ಯತೆಯಾಗಿ ತೆಗೆದುಕೊಂಡು ಪರಿಹರಿಸುವಂತೆ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸುರೇಶ ಗೌಡರು ಸೂಚಿಸಿದರು
ಬೆಳಗುಂಬ ಗ್ರಾಮದ ಸ್ಮಶಾನ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಶಾಸಕರ ನಿಧಿಯಿಂದ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದು ಬಿ. ಸುರೇಶ ಗೌಡರು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಪುಟ್ಟಲಕ್ಷಮ್ಮ ಚಿಕ್ಕರಂಗಯ್ಯ ಸಿದ್ದರಾಮೇಗೌಡ ರಾಮಚಂದ್ರು ಮಂಜುನಾಥ್ ರಾಜಣ್ಣ ಹುಲಿ, ಕರೇರಂಗಯ್ಯ ಬಸವರಾಜು, ತಿಮ್ಮರಾಯಪ್ಪ ಇದ್ದರು. ಪಿಡಿಒ ಬೊಮ್ಮಲಿಂಗಯ್ಯ ವಂದಿಸಿದರು.