ಚಿಕ್ಕನಾಯಕನಹಳ್ಳಿ ಪೊಲೀಸರಿಂದ ಸರಗಳ್ಳರ ಬಂಧನ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆಯರ ಮಾಂಗಲ್ಯ ಸರಗಳನ್ನು ದೋಚುತ್ತಿದ್ದ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರ್ಚ್ 15ರಂದು ಶೆಟ್ಟೀಕೆರೆ ವಿಷ್ಣು, ನೆಲಮಂಗಲದ ಕೃಷ್ಣ ಮತ್ತು ನಟರಾಜ ಎಂಬುವರು ಡಿಸ್ಕವರಿ ಬೈಕ್‌ನಲ್ಲಿ ಬಂದು ಬೆಳಗ್ಗೆ ವಾಯುಸಂಚಾರಕ್ಕೆ ಹೋಗುತ್ತಿದ್ದ ಪ್ರೇಮ ಎಂಬುವರ ಕುತ್ತಿಗೆಗೆ ಕೈಹಾಕಿ ಸುಮಾರು 35 ಗ್ರಾಂ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಜುಲೈ 1ರಂದು ತರಬೇನಹಳ್ಳಿಯ ತೊಳಸಮ್ಮ ಎಂಬುವರು ಅರಣ್ಯ ಇಲಾಖೆಯ ಪಾರ್ಕ್ ಬಳಿ ಸೌದೆ ತರಲು ಮಧ್ಯಾನ್ನ 2.30ರ ಸಮಯದಲ್ಲಿ ಹೋಗಿದ್ದಾಗ ಬೈಕ್‌ನಲ್ಲಿ ಬಂದ ಶೆಟ್ಟೀಕೆರೆಯ ತಿಪ್ಪೇಗುಂಡಿ ರಾಜ ಅಲಿಯಾಸ್ ರಾಜ ಮತ್ತು ನೆಲಮಂಗಲದ ಸಂತೋಷ ಎಂಬುವರು ಸೇರಿ ಮಹಿಳೆಯ ಕತ್ತಿನಲ್ಲಿದ್ದ 15ಗ್ರಾಂ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಮೇಲಿನ ಎರಡು ಪ್ರಕರಣಗಳ ಬಗ್ಗೆ ಚಿ.ನಾ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿತ್ತು. ಸದರಿ ದೂರಿನನ್ವಯ ಪ್ರಕರಣದ ಪತ್ತೆಗೆ ಮೇಲಧಿಕಾರಿಗಳ ಸಲಹೆ ಪಡೆದು ಆರೋಪಿಗಳ ಪತ್ತೆಗೆ ಬಲೆಬೀಸಿದ ಪೊಲೀಸರಿಗೆ ಜುಲೈ 5ರಂದು ಬೆಳಿಗ್ಗೆ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಬಾಚಿಹಳ್ಳಿ ಬಳಿ ಬೆಳಗಿನ ಜಾವ 5ಗಂಟೆ ಸಮಯದಲ್ಲಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಸಿಕ್ಕಿ, ಅವರನ್ನು ತೀವ್ರ ತನಿಖೆಗೊಳಪಡಿಸಿದಾಗ ಮೇಲಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳ ತಪ್ಪೊಪ್ಪಿಗೆಯ ಮೇರೆಗೆ ಅವರನ್ನು ಬಂಧಿಸಿ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಅವರಿಗೆ 15ದಿನಗಳ ಕಾಲ ಬಂಧನವಾಗಿದೆ. ವೃತ್ತನಿರೀಕ್ಷಕ ಕೆ.ಪ್ರಭಾಕರ್, ಉಪ-ನಿರೀಕ್ಷಕ ಬಿ.ಟಿ. ಗೋವಿಂದ, ಸಿಬ್ಬಂದಿಗಳು ಇದ್ದರು.