ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಹಣವಿದೆ, ಜಾಗವಿಲ್ಲ
ಕ.ಪ್ರ.ವಾರ್ತೆ , ತುಮಕೂರು , ಜು. 6
ತುಮಕೂರು ಜಿಲ್ಲೆಯಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಹಣವಿದೆ. ಆದರೆ ಜಾಗವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ವಿಷಾದಿಸಿದರು.
ಅವರು ಜಿಲ್ಲಾಡಳಿತದ ವತಿಯಿಂದ ಏರ್ಪಾಟಾಗಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 27 ನೇ ಪುಣ್ಯತಿಥಿ ಆಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯ 10 ತಾಲೂಕುಗಳಲ್ಲಿ ಜಗಜೀವನ್‌ರಾಂ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಹಣವೂ ಬಿಡುಗಡೆಯಾಗಿದೆ. ಒಟ್ಟು 38 ಕೋಟಿ ರು. ಹಣವಿದೆ. ಆದರೆ ಭವನ ನಿರ್ಮಿಸಲು ಸ್ಥಳವೇ ಇಲ್ಲ ಎಂದು ತಿಳಿಸಿದರು.
ಭವನ ನಿರ್ಮಾಣ ಮಾಡಲು ಜಾಗ ಹುಡುಕಬೇಕಾಗಿದೆ. ಭವನ ನಿರ್ಮಿಸಲು ಜಾಗ ಸಿಕ್ಕಿದ ನಂತರವಷ್ಟೇ ನಿರ್ಮಾಣದ ಯೋಚನೆ ಮಾಡಬಹುದು ಎಂದರು.
ತುಮಕೂರಿನ ಎಂಜಿ ರಸ್ತೆಯಲ್ಲಿರುವ ಅಂಬೇಡ್ಕರ್ ಭವನ ಅದ್ವಾನ ಕುರಿತ ಪ್ರಶ್ನೆಗೆ ಸಚಿವರು ಸಮರ್ಪಕ ಉತ್ತರ ನೀಡಲಿಲ್ಲ.
ಮುಚ್ಚು ಮರೆಯಿಲ್ಲ: ಬಾಬು ಜಗಜೀವನರಾಂ ಅವರ ಪುಣ್ಯತಿಥಿ ಆಚರಿಸಲು ಜಿಲ್ಲಾಡಳಿತ ಯಾವುದೇ ಮುಚ್ಚು - ಮರೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇದೊಂದು ಸ್ಮರಣೆ ಕಾರ್ಯಕ್ರಮ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂಬಂಧ ಸಚಿವರ ಜತೆಯಲ್ಲೇ ಇದ್ದ ಜಿಲ್ಲಾಧಿಕಾರಿ
ಕೆ.ಎಸ್. ಸತ್ಯಮೂರ್ತಿ ಮಾತನಾಡಿ, ಎಂದಿನಂತೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಈ ಬಾರಿ ಸಚಿವರು ಶಿರಾದಲ್ಲಿ ಪಿಂಚಣಿ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಮಾರ್ಗ ಮಧ್ಯೆ ತುಮಕೂರು ಹಾದು ಹೋಗಬೇಕಾಗಿತ್ತು. ಹೀಗಾಗಿ ಈ ಬಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಜಗಜೀವನರಾಂ ಪುಣ್ಯತಿಥಿ ಆಚರಿಸಲು ನಿರ್ಧರಿಸಲಾಯಿತು. ಈ ಸಂಬಂಧ ಎಲ್ಲರಿಗೂ ಮಾಹಿತಿ ನೀಡಲಾಗಿತ್ತು. ಆಚರಣೆ ವೇಳೆ ಯಾವುದೇ ಗೊಂದಲಗಳಾಗಿಲ್ಲ. ಯಾರೂ ಪ್ರತಿಭಟನೆ ಮಾಡಿಲ್ಲ. ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ: ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಜಿಲ್ಲಾ ಪಂಚಾಯತ್ ಸಿಇಓ ಗೋವಿಂದರಾಜು, ಸಮಾಜ ಕಲ್ಯಾಣಾಧಿಕಾರಿ, ಜಿಪಂ ಸದಸ್ಯರಾದ ಕೆಂಚಮಾರಯ್ಯ, ಹುಚ್ಚಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಸೇರಿದಂತೆ ದಲಿತ ಮುಖಂಡರು ಉಪಸ್ಥಿತರಿದ್ದರು.