ಮನೆ ಬಾಗಿಲಿಗೆ ಪಿಂಚಣಿ ಅದಾಲತ್ ಯೋಜನೆ
ಕ.ಪ್ರ. ವಾರ್ತೆ , ಶಿರಾ , ಜು.6
ನೊಂದ ಜನರ ಸಾಮಾಜಿಕ ಭದ್ರತೆ ಕಾಪಾಡುವ ಪಿಂಚಣಿ ಅದಾಲತ್ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಂದು ರಾಜ್ಯ ಸರ್ಕಾರ ಚುನಾವಣಾ ಸಮಯದಲ್ಲಿ ಕೊಟ್ಟ ಆಶ್ವಾಸನೆಯನ್ನು ಈಡೇರಿಸಿದೆ ಎಂದು ರಾಜ್ಯ ಕಾನೂನು ಹಾಗೂ ಸಂಸದೀಯ ಖಾತೆ ಸಚಿವರಾದ ಟಿ.ಬಿ.ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಬರಗೂರು ಗ್ರಾಮದ ಆಂಜನೇಯ ಸ್ವಾಮಿ ಪ.ಪೂ. ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಹುಲಿಕುಂಟೆ ಹೋಬಳಿ ಪಿಂಚಣೆ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಪಿಂಚಣಿ ಅದಾಲತ್ ಹಮ್ಮಿಕೊಳ್ಳುವ ಯೋಜನೆ ನನ್ನದೆ ಕನಸಿನ ಕೂಸಾಗಿದ್ದು ರಾಜ್ಯಾಡಳಿತ ಹಳ್ಳಿಗಳಿಗೆ, ಹಳ್ಳಿಯ ಜನರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಲು ಮುಂದಾಗಬೇಕೆಂಬ ಆಶಯ ಈಗ ಈಡೇರಿದೆ. ಈ ಪಿಂಚಣಿ ಅದಾಲತ್ ಯೋಜನೆಯಿಂದ ಯಾರದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳು ನೇರವಾಗಿ ಸವಲತ್ತನ್ನು ಪಡೆಯಬಹುದಾಗಿದೆ ಎಂದರು.
ಆಶಾದೀಪ: ಈ ಹಿಂದೆ ಶಿರಾದಲ್ಲಿ ಸುಮಾರು 3300 ಜನ ವಿವಿಧ ಪಿಂಚಣಿದಾರರ ವೇತನವನ್ನು ಹಿಂದಿನ ಸರ್ಕಾರ ಸ್ಥಗಿತಗೊಳಿಸಿತ್ತು. ಈಗ ಅದು ಪುನಃ ಪ್ರಾರಂಭ ಮಾಡುವ ಮೂಲಕ ವಯಸ್ಸಾದವರಲ್ಲಿ, ಅಂಗವಿಕಲರಿಗೆ ಆಶಾದೀಪವಾಗಿ ಪರಿಣಮಿಸಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ: ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಲೋಪವೆಸಗಿರುವುದು ಕಂಡು ಬಂದರೆ ತಕ್ಷಣ ಸ್ಥಳದಲ್ಲೇ ಅಮಾನತ್ತುಗೊಳಿಸುವುದಲ್ಲದೆ ಅವರ ಮೇಲೆ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರಿಗಳು ದೀನ ದಲಿತರ ದುರ್ಬಲರ, ಅಬಲರ, ಸರ್ಕಾರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಕೋರಿದ ಸಚಿವರು, ಮಕ್ಕಳನ್ನು ಸಾಕಿ ಬೆಳೆಸಿ ಅವರಿಂದ ಅಬಲರಾದ ವಯಸ್ಕರಿಗೆ ಅವರದೆ ಕುಟುಂಬ ನೆರವಾಗದಿದ್ದಾಗ ಸರ್ಕಾರವಾದರೂ ಅವರ ಕೈ ಹಿಡಿಯಬೇಕು ಎನ್ನುವುದು ಅದಾಲತ್ ಯೋಜನೆಯ ಗುರಿ ಎಂದರು.
ಶಿರಾ ತಾಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರಿದ್ದು ಇದರ ಉಪಯೋಗದಿಂದ ತಾಲೂಕಿನ 18 ಸಾವಿರಕ್ಕೂ ಹೆಚ್ಚು ಮಂದಿ ಅಂಗವಿಕಲತೆ ಅನುಭವಿಸುತ್ತಿದ್ದಾರೆ ಎಂದರು.
ಸರ್ಕಾರಿ ಬೆಲೆಯ 4 ರಷ್ಟು ಹಣ: ತಾಲೂಕಿನ ನೀರಿನ ಬವಣೆ ನೀಗಿಸಲು ಮದಲೂರು ಕೆರೆಗೆ ನೀರು ಹರಿಸುವ ಕಾಲುವೆ ಕಾಮಗಾರಿ ನಡೆಯುತ್ತಿದ್ದು ಸದರಿ ಯೋಜನೆಗೆ ಬೇಕಾದ ಭೂಮಿಯನ್ನು ನೀಡಲು ರೈತರು ಔದಾರ್ಯತೆ ತೋರಬೇಕೆಂದ ಸಚಿವರು ಮದಲೂರು ಕೆರೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸರ್ಕಾರಿ ಬೆಲೆಯ 4 ರಷ್ಟು ಹಣ ನೀಡಲಾಗುವುದು ಎಂದರು.
ಅನುಮತಿ ಪತ್ರ: ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು ಪ್ರಾಸ್ತವಿಕ ನುಡಿಗಳನ್ನಾಡಿ ಸದರಿ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ 416 ಜನ ಫಲಾನುಭವಿಗಳಿಗೆ ಸ್ಥಳದಲ್ಲೆ ಅನುಮತಿ ಪತ್ರ ನೀಡಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿ ಎಲ್ಲರೂ ಆಧಾರ್ ಕಾರ್ಡ್ ಪಡೆದುಕೊಳ್ಳಿ . ಎಲ್ಲಾ ದಾಖಲಾತಿಗಳಿಗಿಂತ ಇದು ಅಮೂಲ್ಯ ಎಂದರು.
ಜಿ.ಪಂ. ಸದಸ್ಯ ಕೆಂಚಮಾರಯ್ಯ, ವೀಶಾಲಾಕ್ಷಿ ಪ್ರಕಾಶಗೌಡ, ಬರಗೂರು ನಟರಾಜ್, ಡಿ.ಸಿ.ಸಿ. ಬ್ಯಾಂಕ್ ನಿರ್ದೆಶಕ ಜಿ.ಎಸ್.ರವಿ, ಹಲುಗುಂಡೇಗೌಡ, ಹಾಲು ಉತ್ಪಾದಕರ ಸಂಘದ ಮೂಡಲಗಿರಿಗೌಡ, ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ತಹಸೀಲ್ದಾರ್ ಕುಲಕರ್ಣಿ, ನಗರಸಭೆ ಸದಸ್ಯರಾದ ಚಾಂದ್ ಪಾಷ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಾರಂಭದಲ್ಲಿ ಉಪವಿಭಾಗಾಧಿಕಾರಿ ಅನಿತಾ ಅವರು ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜ್‌ಕುಮಾರ್ ನಿರೂಪಿಸಿ, ಕಂದಾಯ ತನಿಖಾಧಿಕಾರಿ ರಾಜೇಶ್ ವಂದಿಸಿದರು.