ಅರ್ಜಿ ಆಹ್ವಾನ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರಕ್ಕೆ ಯುಜಿಸಿಯಿಂದ ಮಂಜೂರಾಗಿರುವ ಪ್ರಧಾನ ಸಂಶೋಧನ ಯೋಜನೆಯಲ್ಲಿ ಸಂಶೋಧನ ಸಹಾಯಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಗಾಗಿ ಒಬ್ಬ ಸಂಶೋಧನ ಸಹಾಯಕರ ಅವಶ್ಯಕತೆಯಿದ್ದು, ಕನಿಷ್ಠ ಶೇ. 55 ಅಂಕಗಳೊಂದಿಗೆ ಕನ್ನಡ, ಸಮಾಜ ವಿಜ್ಞಾನ ಅಥವಾ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ದೃಢೀಕೃತ ಅಂಕಪಟ್ಟಿ ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ರ್ಜಿಯನ್ನು ಜುಲೈ 22 ರ ಸಂಜೆ 5.30ರ ಒಳಗೆ ಡಾ. ಶ್ರೀಪಾದ ಭಟ್, ಪ್ರಧಾನ ಸಂಶೋಧಕರು ಹಾಗೂ ಸಹಾಯಕ ಪ್ರಾಧ್ಯಾಪಕರು, ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು-572013 ಇವರಿಗೆ ಕಳುಹಿಸಿಕೊಡಬೇಕು.
'ಮಕ್ಕಳನ್ನು ಆದರ್ಶರಾಗಿಸಿ'
ಹುಳಿಯಾರು: ಇಂದಿನ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಶಿಕ್ಷಣ ಮಕ್ಕಳನ್ನು ಯಾವುದೋ ಒಂದು ಕೆಲಸಕ್ಕೆ,ದುಡಿಯುವ ಮಾರ್ಗಕ್ಕೆ ತೋರುವಂತಾಗಬಾರದು, ಅದು ಮಕ್ಕಳಲ್ಲಿ ಸುಪ್ತ ಪ್ರತಿಭೆಯನ್ನು ಹೊರತಂದು ಸಮಾಜದ ಬಗ್ಗೆ ಮನರಿಕೆ ಮಾಡಿಕೊಟ್ಟು, ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿಸುವ ಮೂಲಕ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಕಾರ್ಯವಾಗಬೇಕಿದೆ ಎಂದು ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮಿಗಳ ತಿಳಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ನಾಲ್ಕನೇ ವರ್ಷದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ, ಆಶೀರ್ವಚನ ನೀಡಿದರು. ಮಕ್ಕಳು ತಾವು ಹೆಚ್ಚು ಅಂಕವನ್ನು ಪಡೆಯುವ ಹಂಬಲವನ್ನು ಹೊಂದಿರುವಂತೆ, ತಾನು ತನ್ನ ಸಮಾಜದಲ್ಲಿ ಯಾವರೀತಿ ಬಾಳಬೇಕು ಎಂಬುದನ್ನು ತಿಳಿಯಬೇಕಿದೆ. ಅಲ್ಲದೆ ಶೈಕ್ಷಣಿಕವಾಗಿ ಮಕ್ಕಳಿಗೆ ಸಮಾಜದ ಮೌಲ್ಯಗಳನ್ನು ತಿಳಿಸುವ ಕಾರ್ಯ ಇಂದಿನ ಶಿಕ್ಷಕರಿಂದ ಹೆಚ್ಚು ನಡೆಯಬೇಕಿದೆ ಎಂದರು. ನಿವೃತ್ತ ನೌಕರರಿಗೆ ಸನ್ಮಾನ ಮಾಡಿದ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ವೀರಶೈವ ಎಂಬುದು ಜಾತಿಯಲ್ಲ ಅದು ಒಂದು ಧರ್ಮ, ಇಲ್ಲಿ ಯಾವುದೇ ಜಾತಿಭೇದವಿಲ್ಲ,ಸಮಾಜಕ್ಕೆ ಅನುಕೂಲವಾಗುವ ಹೆಚ್ಚಿನ ಉದ್ದೇಶಗಳನ್ನು ಹೊಂದಿದ್ದು, ಬಸವಣ್ಣ ಸೆರಿದಂತೆ ಹತ್ತಾರು ಮಹಾನ್ ಆದರ್ಶ ವ್ಯಕ್ತಿಗಳ ಸಿದ್ಧಾಂತಗಳನ್ನು ಒಳಗೊಂಡಿರುವ ವೀರಶೈವ ಧರ್ಮ ಸಮಾಜದ ಹಿತಕಾಯುವ ಆಚರಣೆಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಆದರೆ ಪ್ರಸ್ತುತದಲ್ಲಿ ನಮ್ಮಲ್ಲಿ ಒಗ್ಗಟ್ಟಿಲ್ಲದಂತಾಗಿದ್ದು, ಇತರೆ ಧರ್ಮದ ಮುಂದೆ ನಮ್ಮ ಸ್ಥಾನ ಕೆಳ ಇಳಿಯುತ್ತಿದೆ ಎಂದರು. ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್, ತಾ.ಪಂ.ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಪಂಚಾಕ್ಷರಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಅವರು ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಿದರು. ವಿರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದು, ಡಯಟ್ ಉಪನಿರ್ದೇಶಕ ಈಶ್ವರಪ್ಪ, ವೀರಶೈವ ಸಮಾಜದ ಅಧ್ಯಕ್ಷ ನೀಲಕಂಠಯ್ಯ, ನಿವೃತ್ತ ನಿರ್ದೇಶಕ ಪಾಲಾಕ್ಷಯ್ಯ , ತಾ.ಪಂ.ಮಾಜಿ ಅಧ್ಯಕ್ಷ ಜಗದೀಶ್, ತಾ.ಪಂ.ಸದಸ್ಯರಾದ ನವೀನ್, ವಸಂತಯ್ಯ, ಪುರಸಭಾ ಸದಸ್ಯೆ ರೂಪಾ, ನೌಕರರ ಸಂಘದ ಸೋಮಶೇಖರಯ್ಯ, ಬಾಲಚಂದರ್, ಚಿ.ನಾ.ಹಳ್ಳಿ ವೀರಶೈವ ಸಮಾಜದ ಜಯಣ್ಣ ಉಪಸ್ಥಿತರಿದ್ದರು.
ಶಿಕ್ಷಕರ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆಯಾಚನೆ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ರವಿಕುಮಾರ್ ಶಿಕ್ಷಕರ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಗುಬ್ಬಿ: ಪಟ್ಟಣದ ಜಿ.ಹೆಚ್. ಗುರು ಧರ್ಮಾರ್ಥ ಟ್ರಸ್ಟ್ ಮಕ್ಕಳ ಮನೆ ವತಿಯಿಂದ 2012-13 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಮತ್ತು ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕಗಳಿಸಿದ ತಾಲೂಕಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಹವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಜು.15 ರೊಳಗೆ ಅಂಕಪಟ್ಟಿಯ ಪ್ರತಿ, ವಿಳಾಸ,ದೂರವಾಣಿ ಸಂಖ್ಯೆಗಳನ್ನೊಳಗೊಂಡ ವಿವರವನ್ನು ಅರ್ಜಿ ಮೂಲಕ ಜಿ.ಎಚ್.ಗುರು ಧರ್ಮಾರ್ಥ ಟ್ರಸ್ಟ್ ಮಕ್ಕಳ ಮನೆ ಇವರಿಗೆ ತಲುಪಿಸುವಂತೆ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಮಹದೇವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಪ್ರತಿಭಟನೆ
ಗುಬ್ಬಿ: ತಾಲೂಕಿನ 26 ಭಾಷಾ ಅಲ್ಪ ಸಂಖ್ಯಾತರ ಉರ್ದು ಶಾಲೆಗಳಿದ್ದು ಕಳೆದ ಹಲವು ವರ್ಷಗಳಿಂದಲೂ ಸುಮಾರು 25 ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜುಲೈ 9 ರಂದು ತಾಲೂಕಿನ ಎಲ್ಲಾ ಉರ್ದು ಶಾಲೆಗಳ ಎಸ್.ಡಿ.ಎಂ.ಸಿ.ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಉರ್ದು ಶಾಲೆಗಳ ವಿದ್ಯಾರ್ಥಿಗಳು ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ತಾಲೂಕು ಮುಸ್ಲಿಂ ಅಲ್ಪಸಂಖ್ಯಾತರ ಅಭಿವೃದ್ಧಿ ಸಂಘ ಹಾಗೂ ಉರ್ದು ಶಾಲೆಗಳ ರಕ್ಷಣಾ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.