ಅಲೆಮಾರಿ ದೊಂಬಿದಾಸ ಜನಾಂಗ ಸಾಮಾಜಿಕವಾಗಿ ಹಿಂದುಳಿದಿದೆ
ಕ.ಪ್ರ.ವಾರ್ತೆ , ತುಮಕೂರು , ಜು. 7
ಅಲೆಮಾರಿ ದೊಂಬಿದಾಸ ಜನಾಂಗ ಕಲಾ ಪ್ರದರ್ಶನ ಮಾಡಲು ಬಳಸಿದ ಶಕ್ತಿಯನ್ನು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಬಳಸಿಕೊಳ್ಳಲಿಲ್ಲ. ಇದರಿಂದ ಜನಾಂಗ ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ಹೇಳಿದರು.
ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಅಲೆಮಾರಿ ದೊಂಬಿದಾಸರ ಸಂಘದಿಂದ ಭಾನುವಾರ ಆಯೋಜಿಸಿದ್ದ ಏಕತಾರಿ ಕಲಾರತ್ನ ಪ್ರಶಸ್ತಿ ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಾ ಸೇವೆಗೆ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ ಅಲೆಮಾರಿ ದೊಂಬಿದಾಸ ಜನಾಂಗ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ನಿರ್ಲಕ್ಷಿತ ಸಮಾಜ ಸಮಾಜದ ಮುಖ್ಯವಾಹಿನಿಗೆ ಬರಲು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೇ ಹೋರಾಟದ ಮನೋಭಾವ ತಾನಾಗಿಯೇ ಬರುವುದರಿಂದ ನಿಮ್ಮ ನೋವು ಸರ್ಕಾರಗಳಿಗೆ ಕೇಳಿಸುತ್ತದೆ ಎಂದು ಸಲಹೆ ನೀಡಿದರು. ನಿಲ್ಲಲು ನೆಲೆಯಿಲ್ಲದೆ ಕಲೆಯನ್ನು ನಂಬಿಕೊಂಡು ಊರೂರು ಸುತ್ತುವ ಜನಾಂಗ ಸಮಾಜದಿಂದ ಶೋಷಿತವಾಗಿದ್ದರೂ ಸರ್ಕಾರದ ಮೀಸಲಾತಿ ಪಡೆಯಲು ವಿಫಲವಾಗಿದೆ ಎಂದರು.
ಉಪ ಖಜಾನೆ ಅಧಿಕಾರಿ ಕುಪ್ಪೆನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಹಿನ್ನೆಲೆಯ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಜನಾಂಗ ಸಮಾಜದಿಂದ ತಿರಸ್ಕೃತವಾಗಿದೆ. ಸರ್ಕಾರಗಳ ನಿರ್ಲಕ್ಷ್ಯದಿಂದ ಪಡೆಯಬಹುದಾದ ಸೌಲಭ್ಯದಿಂದ ಜನರು ವಂಚಿತರಾಗಿದ್ದಾರೆ. ರಾಜ್ಯದಲ್ಲಿ 50 ಸಾವಿರ ಜನಸಂಖ್ಯೆ ಇರುವ ಜನಾಂಗಕ್ಕೆ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.