ಭ್ರಷ್ಟಾಚಾರದ ವಿರುದ್ಧ ಮನೆಯಿಂದಲೇ ಪ್ರತಿಭಟನೆ ಆರಂಭವಾಗಲಿ
ಕ.ಪ್ರ.ವಾರ್ತೆ , ತುಮಕೂರು , ಜು. 7
ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗಿನ ವಿರುದ್ಧ ಮಹಿಳೆಯರು ಮನೆಯಿಂದಲೇ ಪ್ರತಿಭಟಿಸುವುದನ್ನು ಕಲಿಯಬೇಕಾಗಿದೆ ಎಂದು ಮಾಜಿ ಸಚಿವೆ ರಾಣಿಸತೀಶ್ ತಿಳಿಸಿದ್ದಾರೆ.
ನಗರದ ಬಿರ್ಲಾ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯಾದ ಇನ್ನರ್ ವ್ಹಿಲ್ 2013-14ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭ್ರಷ್ಟಾಚಾರವನ್ನು ಮಹಿಳೆಯರು ಒಪ್ಪಿಕೊಂಡರೆ ಇಡೀ ಜಗತ್ತೇ ನಾಶವಾಗಲಿದೆ ಎಂದು ಎಚ್ಚರಿಸಿದರು.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗಲು ಮಹಿಳೆಯರು ಒಂದು ರೀತಿಯಲ್ಲಿ ಕಾರಣ ಎಂದ ಅವರು, ಮೊದಲು ನಾವು ಇವುಗಳ ವಿರುದ್ಧ ಹೋರಾಡುವುದಕ್ಕೆ ನಮ್ಮ ಮಕ್ಕಳಿಗೆ ಮನೆಯಲ್ಲಿಯೇ ತಯಾರು ಮಾಡಬೇಕಾಗಿದೆ. ಇಲ್ಲದಿದ್ದರೆ ಭ್ರಷ್ಟಾಚಾರ, ಅತ್ಯಾಚಾರದಂತಹ ವಿಚಾರಗಳ ಬಗ್ಗೆ ಮಾತನಾಡುವ ನೈತಿಕ ಶಕ್ತಿಯನ್ನು ನಾವು ಕಳೆದುಕೊಂಡಂತೆ ಎಂದರು.
ಗೆಲವು ಸುಲಭವಲ್ಲ: ಎಲ್ಲಾ ಕ್ಷೇತ್ರಗಳಲ್ಲಿ ಇಂದು ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ನಮ್ಮಂತವರು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ನಾವು ಕೂಡ ಎಲ್ಲಾ ಎಡವಿದ್ದೇವೆ ಎಂದೇನಿಸುತ್ತದೆ ಎಂದ ಅವರು, ಹೆಣ್ಣಿಗೆ ಎಲ್ಲವನ್ನು ನಿಭಾಯಿಸುವ ಶಕ್ತಿಯಿದೆ. ಮೊದಲು ನಮ್ಮ ಮನೆಯ ಮುಖ್ಯಮಂತ್ರಿಗಳಾಗಿ ಸೈ ಎನ್ನಿಸಿಕೊಂಡು ನಂತರ ಸಮಾಜ ಸೇವೆಯತ್ತ ಮುಖ ಮಾಡಬೇಕಾಗಿದೆ. ಮಹಿಳೆಯರು ಸಂಘಟಿತರಾಗಿ ಸಮಾಜಕ್ಕೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಬೇಕಾಗಿದೆ ಎಂದರು.
ಮಹಿಳೆ ಇಂದು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ನಾವು ಮಹಿಳೆಯರಿಗಾಗಿ ಎಂಬ ಇನ್ನರ್ ವ್ಹಿಲ್ನ ಈ ವರ್ಷದ ಘೋಷಣೆ ಅತ್ಯಂತ ಸಮಂಜಸವಾಗಿದೆ. ಮೊದಲು ನಾವು ಒಗ್ಗೂಡಿ ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಿಂದ ಹೊರಬರಬೇಕಾಗಿದೆ. ಸಮಾಜದ ಕೆಳವರ್ಗದ ಜನರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಇಂತಹ ಸಂಸ್ಥೆಗಳ ನೇತೃತ್ವದಲ್ಲಿ ಮಾಡಬೇಕಾಗಿದೆ. ಓರ್ವ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಇರುತ್ತಾಳೆ ಎಂಬಂತೆ ಓರ್ವ ಯಶಸ್ವಿ ಮಹಿಳೆಯ ಹಿಂದೆ ಪುರುಷರ ಬೆಂಬಲವೂ ಇರುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮವೇ ನಿದರ್ಶನ ಎಂದು ರಾಣಿಸತೀಶ್ ನುಡಿದರು.
ಒಳ್ಳೆಯ ಬೆಳವಣಿಗೆ: ಇನ್ನರ್ ವ್ಹಿಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುಮಪ್ರಸಾದ್ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎಂಬ ಮಾತು ಹೋಗಿ ಸಮಾಜದ ಕಣ್ಣು ಎಂಬ ಮಾತು ನಿಜವಾಗುತ್ತಿದೆ. ತನ್ನ ಬಿಡುವಿಲ್ಲದ ಕೆಲಸ ನಡುವೆಯೂ ಹೊರಬಂದು ಸಮಾಜ ಸೇವೆಯಲ್ಲಿ ತೊಡಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಮೊದಲ ಕಾರ್ಯಕ್ರಮವಾಗಿ ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಾಣಕ್ಕೆ 25 ಸಾವಿರ ದೇಣಿಗೆ ನೀಡುವ ಮೂಲಕ ಈ ವರ್ಷದ ಸೇವಾ ಕಾರ್ಯಕ್ರಮಗಳನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು. ಇನ್ನರ್ ವ್ಹಿಲ್ ತುಮಕೂರು ಅಧ್ಯಕ್ಷೆ ಆಶಾ ಶೈಲೇಂದ್ರ ಮಾತನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ನಿರ್ಮಲ ವಿಶ್ವನಾಥ್, ಕಾರ್ಯದರ್ಶಿ ರಾಜೇಶ್ವರಿ ಚಂದ್ರಶೇಖರ್, ನಾಗಮಣಿ ಪ್ರಭಾಕರ್ ಇದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯ, ತ್ರಿಚಕ್ರ ಸೈಕಲ್ ಮತ್ತಿತರರ ಪರಿಕರಗಳನ್ನು ವಿತರಿಸಲಾಯಿತು.