ಸವಲತ್ತಿಗಾಗಿ ಕಂಬಳಿ ನೇಕಾರರ ಆಗ್ರಹ
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಹಿಂದುಳಿದವರ್ಗದವರಿಗೆ ಆಶಾಕಿರಣವಾಗಿರುವ ಮತ್ತು 3000 ಸದಸ್ಯರನ್ನು ಹೊಂದಿರುವ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಸಂಪನ್ಮೂಲ ನೀಡಿ ಪುನಶ್ಚೇತನಗೊಳಿಸಬೇಕೆಂದು ಪುರಸಭಾ ಸದಸ್ಯ ಹಾಗೂ ಕಂಬಳಿ ಸೊಸೈಟಿ ನಿರ್ದೇಶಕರಲೊಬ್ಬರಾದ ಸಿ.ಡಿ.ಚಂದ್ರಶೇಖರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ನೇಕಾರರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ತಾಲೂಕಿನಲ್ಲಿ ಕಂಬಳಿ ನೇಕಾರರು ಬಹಳ ಸಂಕಷ್ಟದಲ್ಲಿದ್ದಾರೆ. ಕಂಬಳಿ ನೇಕಾರಿಕೆಯಿಂದ ಜೀವನ ನಡೆಸಲು ದುಸ್ತರವಾಗಿದೆ. ಜೊತೆಗೆ ಕಂಬಳಿ ನೇಕಾರಿಕೆಗೆ ಬೇಕಾಗವು ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇದರಿಂದ ನೇಕಾರರು ತಮ್ಮ ವೃತ್ತಿಯನ್ನು ಕೈಬಿಡುವ ಮನಸ್ಥಿಯಲ್ಲಿದ್ದಾರೆ. ಈ ಭಾಗದಲ್ಲಿ ಯಾವುದೇ ಕೈಗಾರಿಕೆ ಮತ್ತು ನೀರಾವರಿ ಸೌಲಭ್ಯವಿಲ್ಲದ ಕಾರಣ ಬಡಜನತೆ ಜೀವನ ನಿರ್ವಹಣೆಗಾಗಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನೇಕಾರರಿಗೆ ಉದ್ಯೋಗ ಕಲ್ಪಿಸಲು ಸಂಘದಲ್ಲಿ ಉತ್ತಮ ತಂತ್ರಜ್ಞಾನದಿಂದ ಕೂಡಿರುವ ಯಂತ್ರೋಪಕರಣಗಳಾಗಲಿ, ಸುಸಜ್ಜಿತವಾದ ಕಟ್ಟಡವಾಗಲಿ ಇರುವುದಿಲ್ಲ. ಸಂಘದ ವಶದಲ್ಲಿ 7.18 ಎಕರೆ ಜಮೀನಿದ್ದು, ನೇಕಾರಿಕೆಗೆ ಅನುಕೂಲವಾಗುವ ಕಾರ್ಯಾಗಾರವನ್ನು ನಿರ್ಮಿಸಲು ಹಾಗು ಅತ್ಯಾಧುನಿಕ ಮಗ್ಗಗಳನ್ನು ಅಳವಡಿಸಲು ಕಂಬಳಿಗಳನ್ನು ನೈಸ್ ಮಾಡಲು ಸರ್ಕಾರದಿಂದ ನಮ್ಮ ಸಂಘಕ್ಕೆ ಬಜೆಟ್‌ನಲ್ಲಿ ಸುಮಾರು 3 ಕೋಟಿಗಳಷ್ಟು ಹಣವನ್ನು ಮಂಜೂರು ಮಾಡಿಸಿ ಬಿಡುಗಡೆ ಮಾಡಿಕೊಟ್ಟರೆ ಬಡ ನೇಕಾರರ ಬದುಕು ಹಸನಾಗುತ್ತದೆ ಹಾಗೂ ಸಂಘದ ಬಲವರ್ಧನೆಗೂ ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ಅವರು ನಿವೇದಿಸಿಕೊಂಡಿದ್ದಾರೆ.