ಸ್ಪರ್ಶರಿಂದ ಅಸ್ಪ ೃರ್ಶರ ಅವಕಾಶ ಕಬಳಿಕೆ
ಕ.ಪ್ರ. ವಾರ್ತೆ , ತುಮಕೂರು , ಜು.7
ರಾಜಕೀಯ ಮೀಸಲಾತಿಯಲ್ಲಿ ಅಸ್ಪೃರ್ಶರ ಅವಕಾಶವನ್ನೆಲ್ಲಾ ಸ್ಪರ್ಶರು ಕಬಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಮಾಡಿದ್ದಾರೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಅಸ್ಪರ್ಶರ ರಾಜಕೀಯ ಮೀಸಲಾತಿಯನ್ನು ಸ್ಪರ್ಶರು ಕಬಳಿಸುತ್ತಿರುವುದರಿಂದ ರಾಜಕೀಯ ಸ್ಥಾನಮಾನಗಳಿಂದ ಛಲವಾದಿಗಳು ವಂಚಿತರಾಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 80 ಲಕ್ಷದಷ್ಟು ಎಡಗೈ, ಬಲಗೈ ಸಮುದಾಯದವರಿದ್ದರೂ ಅಸ್ಪರ್ಶರು ಕೇವಲ 19 ಶಾಸಕರಿದ್ದಾರೆ. ಅದೇರೀತಿ ಸ್ಪರ್ಶ ಸಮುದಾಯದ ಲಂಬಾಣಿ, ಬೋವಿ, ಕೊರಮ, ಕೊರಚರು 30 ಲಕ್ಷದಷ್ಟಿದ್ದು 17 ಶಾಸಕರು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಸ್ಪರ್ಶರು ಅಗ್ರಪಾಲು ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯಾಯ: ಜಿಪಂ, ತಾಪಂ ಹಾಗೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿಯಲ್ಲೂ ಅಸ್ಪರ್ಶರಿಗೆ ಇದೇ ರೀತಿ ಅನ್ಯಾಯವಾಗುತ್ತಿದೆ. ಸರ್ಕಾರಿ ಹುದ್ದೆಗಳಲ್ಲೂ ಸ್ಪರ್ಶರು ಅಧಿಕಾರ, ಸವಲತ್ತುಗಳನ್ನು ಹೆಚ್ಚು ಪಾಲು ಪಡೆಯುತ್ತಿದ್ದಾರೆ. ಇದರಿಂದ ಅಸ್ಪರ್ಶರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಈಗಲಾದರೂ ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಛಲವಾದಿಗಳು ಒಗ್ಗೂಡಬೇಕಿದೆ ಎಂದರು.
ಪರಮೇಶ್ವರ್ಗೆ ಡಿಸಿಎಂ ಪಟ್ಟ: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಅವರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಲಾಗಿಲ್ಲ. ಶೀಘ್ರ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡುವಂತೆ ಶಿವರಾಂ ಒತ್ತಾಯಿಸಿದರು.
ಶೋಷಣೆ, ಅನ್ಯಾಯ, ತುಳಿತಕ್ಕೊಳಗಾಗಿರುವ ಛಲವಾದಿ ಸಮುದಾಯವನ್ನು ರಾಜ್ಯದಲ್ಲಿ ಸಂಘಟಿಸುವ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದು ಅಕ್ಟೋಬರ್ನಲ್ಲಿ ಛಲವಾದಿ ಬೃಹತ್ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಈ ಸಮಾವೇಶಕ್ಕೆ 5 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದರು.
ನಿಷ್ಕ್ರಿಯಗೊಂಡಿರುವ ಛಲವಾದಿ ಮಹಾಸಭಾಕ್ಕೆ ಮತ್ತೆ ಜೀವತುಂಬಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. 1 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದು ನಂತರ ಪ್ರಜಾಪ್ರಭುತ್ವ ರೀತಿಯಲ್ಲಿ ರಾಜ್ಯ, ಜಿಲ್ಲಾಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ನಡೆಯಲಿದೆ.
ಅಡ್ಡಿ ಪಡಿಸಲು ಯತ್ನ: ಛಲವಾದಿ ಮಹಾಸಭಾದ ಹಿಂದಿನ ರಾಜ್ಯಾಧ್ಯಕ್ಷರು ಮತ್ತು ಅವರ ಬೆಂಬಲಿಗರು ಇದಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಮಹಾಸಭಾ ಒಗ್ಗೂಡಿಸಲು ನಿಸ್ವಾರ್ಥದಿಂದ ಕಂಕಣ ತೊಟ್ಟಿರುವುದಾಗಿ ಶಿವರಾಂ ಹೇಳಿದರು.
ಲೋಕಸಭೆ ಚುನಾವಣೆಗೂ ಮುನ್ನ ಛಲವಾದಿ ಸಮುದಾಯದ ಶಕ್ತಿಯನ್ನು ಬಿಂಬಿಸಲು ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಶಿವರಾಂ ಹೇಳಿದರು.
ಸಭೆಯಲ್ಲಿ ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಿ.ಕೃಷ್ಣಮೂರ್ತಿ, ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಜಿ.ಆರ್. ಚಂದ್ರಶೇಖರಯ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್ದಾಸ್, ಟೂಡಾ ನಿವೃತ್ತ ಆಯುಕ್ತ ಡಾ.ಪಿ.ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಅಂತೂರಯ್ಯ, ಹೆಬ್ಬಾಕ ರಮೇಶ್, ನಾಗೇಶ್ ಉಪಸ್ಥಿತರಿದ್ದರು.
ಬ್ರಾಹ್ಮಣರಿಗಿಂತ ಬುದ್ಧಿವಂತರು
ತುಮಕೂರು: ಬ್ರಾಹ್ಮಣರಿಗಿಂತಲೂ ಛಲವಾದಿಗಳು ಬುದ್ಧಿವಂತರು, ರೂಪವಂತರು ಎಂದು ಛಲವಾದಿ ಮಹಸಭಾದ ಉಪಾಧ್ಯಕ್ಷ ಕೆ. ವೀರಭದ್ರಪ್ಪ ಅಭಿಪ್ರಾಯಪಟ್ಟರು. ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದರು. ಐಕ್ಯತೆ ವಿಷಯದಲ್ಲಿ ಸಾಕಷ್ಟು ಹಿಂದೆ ಬಿದ್ದಿದ್ದೇವೆ. ಒಳವೈಮನಸ್ಯ ಬಿಟ್ಟು ಒಗ್ಗೂಡದಿದ್ದರೆ ನೆಲಕಚ್ಚಿ ಹೋಗುತ್ತೇವೆ ಎಂದು ತಿಳಿಸಿದರು.