ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಂಕೆರೆಯಲ್ಲಿ ಅದ್ಧೂರಿ ಕಾರಹಬ್ಬ

Mainashree
Updated On : 8 Jul 2013, 11:40 am

ಹುಳಿಯಾರು: ರೈತರು ಆಚರಿಸುವ ಸಾಂಪ್ರದಾಯಿಕ ಹಬ್ಬಗಳಲ್ಲಿ ಕಾರಹುಣ್ಣಿಮೆ ಹಬ್ಬವು ಸಹ ಒಂದಾಗಿದ್ದು, ಈ ವರ್ಷದಲ್ಲಿ ಯಾವ ಫಸಲು(ಬೆಳೆ) ಉತ್ತಮವಾಗಿ ಬೆಳೆಯುತ್ತದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಕಾರಹಬ್ಬವನ್ನು ಆಚರಿಸುವ ವಾಡಿಕೆಯಂತೆ ಹೋಬಳಿಯ  ಕೆಂಕೆರೆ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿನ ರೈತರು  ಅಮವಾಸ್ಯೆಯ ಮುನ್ನಾ ದಿನವಾದ ಭಾನುವಾರ ಹಳ್ಳಿಕಾರಹಬ್ಬವೆಂದು ಆಚರಿಸಿದರು.
 ಹಬ್ಬದ ದಿನದಂದು ಕೃಷಿ ಕಾರ್ಯಗಳಿಗೆ ರಜಾ ಹಾಕಿದ ರೈತರು, ತಂತಮ್ಮ ರಾಸು, ಎತ್ತಿನಗಾಡಿ, ನೇಗಿಲು ಸೇರಿದಂತೆ ಕೃಷಿಗೆ ಉಪಯೋಗಿಸುವ ಸಾಮಗ್ರಿಗಳನ್ನು ಪೂಜಿಸುತ್ತಾರೆ. ಅಲ್ಲದೆ ದನಕರುಗಳಿಗೆ ಮಜ್ಜನ ಮಾಡಿಸಿ ನಂತರ ರಾಸುಗಳ ಕೊಂಬುಗಳಿಗೆ ಬಗೆಬಗೆಯ ಬಣ್ಣ ಹಚ್ಚಿ, ಸಿಂಗರಿಸಿ ಪೂಜೆ ಸಲ್ಲಿಸಿ ನೈವೇದ್ಯ ನೀಡುತ್ತಾರೆ. ಕೆಂಕೆರೆ ರಂಗನಾಥಸ್ವಾಮಿ ದೇವಾಲಯದ ಹತ್ತಿರವಿರುವ ಕಾರೆಕಲ್ಲಿಗೆ ಕೆಂಪು ಮತ್ತು ಬಿಳಿ ಬಣ್ಣವನ್ನು ಪಟ್ಟಿಯೋಪಾದಿಯಲ್ಲಿ ಹಚ್ಚಿ , ಬೇವಿನ ಸೊಪ್ಪು ಹಾಗೂ ಅಂಬಳ್ಳಿಯ ಬಳ್ಳಿಯನ್ನು ಬಿಗಿಯಾಗಿ ಸುತ್ತಿ ಸಿಂಗರಿಸಿ ನಂತರ ಊರಿನ ಸದಾಶಿವಣ್ಣ ಎಂಬುವರು ಸಂಪ್ರದಾಯದಂತೆ ತಮ್ಮ ನಿವಾಸದಿಂದ ಒಂದು ಚಿಕ್ಕ ಮಡಿಕೆಯಲ್ಲಿ ನೀರಿನೊಂದಿಗೆ ರಾಗಿ, ಜೋಳ, ಎಳ್ಳು, ಸಾವೆ, ಸಜ್ಜೆ, ನವಣೆ ಸೆರಿದಂತೆ ಎಲ್ಲಾ ಬಗೆಯ ಧಾನ್ಯಗಳನ್ನು ಹಾಕಿಕೊಂಡು ಬಂದು ಕಾರೆಕಲ್ಲಿನ ಹತ್ತಿರವಿಟ್ಟು ಧಾರ್ಮಿಕವಾಗಿ ಪೂಜೆ ಸಲ್ಲಿಸಿ ಗ್ರಾಮಸ್ಥರ ಒಪ್ಪಿಗೆ ಪಡೆದು ಆ ಮಡಿಕೆಯನ್ನು  ಒಂದು ಕೋಲಿನಿಂದ ಒಡೆಯುತ್ತಾರೆ. ಆಗ ಯಾವ ಧಾನ್ಯ ಮುಂದೆ ಬಿದ್ದಿರುತ್ತದೆ ಆ ಧಾನ್ಯದ ಫಸಲು ಈ ಬಾರಿ ಅಧಿಕವಾಗುತ್ತದೆ ಎಂಬ ನಂಬಿಯಿಂದ ಇಂದಿಗೂ ಈ ಆಚರಣೆ ನಡೆಯುತ್ತಲೇ ಬಂದಿದೆ.ನಂತರ ಕಾರೆಕಲ್ಲಿಗೆ ಕಟ್ಟಿದ ಅಂಬಳ್ಳಿ ಹಾಗೂ ಬೇವಿನ ಸೊಪ್ಪನ್ನು ರೈತರು ತಮ್ಮ ಮನೆಗೆ ಕೊಂಡೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪುರೋಹಿತರಾದ ಚನ್ನಬವಯ್ಯ, ಶಿಕ್ಷಕ ಕೆ.ವಿ. ರಮೇಶ್, ಕೆ.ಪಿ. ಚನ್ನಬಸವಯ್ಯ, ಕುಮಾರಣ್ಣ ಹಾಗೂ ಊರಿನ ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement