ಸಾಮಾನ್ಯರಿಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗಲಿ: ಶಾಸ್ತ್ರಿ ಕರೆ
ಕ.ಪ್ರ. ವಾರ್ತೆ ತುಮಕೂರು ಜು.8
ದೇಶದ ಎಲ್ಲಾ ಜನಸಾಮಾನ್ಯರಿಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ವಿತ್ತೀಯ ಸೇರ್ಪಡೆ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆಯನ್ವಯ ಬ್ಯಾಂಕಿಂಗ್ ಸೌಲಭ್ಯಗಳಿಲ್ಲದ 2000 ಕ್ಕಿಂತಲೂ ಕಡಿಮೆ ಜನಸಂಖ್ಯೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ನ ಅಧ್ಯಕ್ಷ ಡಿ. ಸೋಮಶೇಖರ್ ಶಾಸ್ತ್ರಿ ಹೇಳಿದರು.
ಅವರು ತುಮಕೂರು ನಗರಕ್ಕೆ ಸಮೀಪದ ಕೆ. ಪಾಲಸಂದ್ರದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ನ 344ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬ್ಯಾಂಕ್ ಹಲವಾರು ಸಾಲ ಸೌಲಭ್ಯಗಳನ್ನು ರೂಪಿಸಿದೆ. ಜನತೆ ಬ್ಯಾಂಕಿನಿಂದ ಸಾಲಸೌಲಭ್ಯಗಳನ್ನು ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಹೇಳಿದರು.
ಬ್ಯಾಂಕ್ ಖಾತೆ ಅವಶ್ಯಕತೆ: ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಎಂ.ಎನ್. ಪ್ರಸನ್ನ ನರಸಿಂಹರಾವ್ ಮಾತನಾಡಿ ವಿದ್ಯಾರ್ಥಿ ವೇತನ, ಅಡುಗೆ ಅನಿಲ ಸಹಾಯಧನ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಆಧಾರಿತ ಬ್ಯಾಂಕ್ ಖಾತೆಗಳ ಅವಶ್ಯಕತೆಯನ್ನು ವಿವರಿಸಿದರು.
ಭವಿಷ್ಯದ ಆರ್ಥಿಕ ಭದ್ರತೆಗಾಗಿ ಬ್ಯಾಂಕಿನಲ್ಲಿ ಉಳಿತಾಯ ಮಾಡಬೇಕೆಂದು ಹೇಳಿದರು.
ಬ್ಯಾಂಕ್ನ ತುಮಕೂರಿನ ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ. ಮಂಜುನಾಥಯ್ಯ ಮಾತನಾಡಿ ಬ್ಯಾಂಕ್ ಸಂಪೂರ್ಣ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟಿದ್ದು ತಮ್ಮ ಬ್ಯಾಂಕಿನಲ್ಲಿ ಠೇವಣಿ ಖಾತೆಗಳಿಗೆ ಇತರೆ ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ಲಭ್ಯವಿದ್ದು ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಜೆ.ಎಸ್. ವೀರಭದ್ರನ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ಜಯರಾಮಯ್ಯ, ನೂತನ ಶಾಖೆ ವ್ಯವಸ್ಥಾಪಕ ಸಿ. ಶಿವಕುಮಾರ್, ಬ್ಯಾಂಕಿನ ಹಿರಿಯ ಅಧಿಕಾರಿ ಕೆ. ರಾಘವೇಂದ್ರ, ಎಂ.ಎನ್. ಸುರೇಶ್ಬಾಬು, ಎ.ಎನ್. ನೀಲಕಂಠ, ಗ್ರಾ.ಪಂ. ಅಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ನಾಗರತ್ನಮ್ಮ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.