ಅಧ್ಯಯನ ವರದಿ: ನಿರ್ದೇಶಕಿ ಗಿರಿಜಾಗೆ ಸಲ್ಲಿಕೆ
ಕ.ಪ್ರ.ವಾರ್ತೆ ತುಮಕೂರು ಜು. 8
ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಕೆಲವು ಜಾತಿಗಳನ್ನು ಕೈ ಬಿಡುವ ಮತ್ತು ಸೇರಿಸಿಕೊಳ್ಳುವ ಭಾರತೀಯ ಪರಿಶಿಷ್ಟ ಜಾತಿಗಳ ಆಯೋಗದ ವತಿಯಿಂದ ಆಹ್ವಾನಿಸಲಾಗಿದ್ದ ಸಲಹೆ ಸೂಚನೆಗಳ ಮೇರೆಗೆ ಲೇಖಕ, ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಅವರು ನೀಡಿರುವ ಸಲಹೆ ಸೂಚನೆ ಮೇರೆಗೆ ಅಧ್ಯಯನ ವರದಿಯೊಂದನ್ನು ಆಯೋಗ ನಿರ್ದೇಶಕಿ ಗಿರಿಜಾ.ಪಿ. ಅವರಿಗೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ, ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ. ಓ.ಅನಂತರಾಮಯ್ಯ, ಎಂ.ಸಿ. ಶ್ರೀನಿವಾಸ್ ಅವರೊಂದಿಗೆ ಸಲ್ಲಿಸಲಾಯಿತು. ಚೇಳೂರು ವೆಂಕಟೇಶ್ ನೀಡಿರುವ ಸಲಹೆ ಸೂಚನೆಗಳಲ್ಲಿ ಮುಖ್ಯವಾಗಿ ಕೆಳಕಂಡ ಸಲಹೆ ನೀಡಲಾಗಿದೆ. ಈಗಿರುವ 101 ಜಾತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ನೀಡಲಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ಜಾರಿಗೆ ತರಬೇಕು. ಪರಿಶಿಷ್ಟಜಾತಿಗಳಲ್ಲಿರುವ ತಾರತಮ್ಮವನ್ನು ಹೋಗಲಾಡಿಸಲು ಕರ್ನಾಟಕದ ಪರಿಶಿಷ್ಟ ಜಾತಿಗಳ ಪ್ರಗತಿ ಪರ ವಿಚಾರಗಳ ಬಗ್ಗೆ ವಿವರಸಲಾಗಿದೆ. 1976 ರಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿರುವ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳನ್ನು ಜಾತಿಯಿಂದ ಕೈ ಬಿಡಬೇಕು. ಒಂದು ವೇಳೆ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಮ್ಮತಿಸುವುದಾದರೆ ಜನ ಸಂಖ್ಯಾಧಾರಿತ ಒಳ ಮೀಸಲಾತಿ ನೀಡಬಹುದಾಗಿದೆ. ಅದರೆ ಹಿಂದುಳಿದ ವರ್ಗಗಳಿಗೆ ಸರಿ ಸಮನಾದ ಸಾಮಾಜಿಕ ಗುಂಪುಗಳಾದ ಈ 4 ಜಾತಿಗಳನ್ನು ಸಾಮಾಜಿಕ ಸ್ಥಾನ ಮಾನ ಅಧ್ಯಯನದ ಆಧಾರದ ಮೇಲೆ ಪ್ರವರ್ಗ-1, ಓಬಿಸಿ ಸಾಮಾಜಿಕ ಗುಂಪಿನ ಮೀಸಲಾತಿಗೆ ಒಳಪಡಿಸಬೇಕು. ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿರುವ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳಿಗೆ ಹಂಚಿಹೋಗಿರುವ ಅಲೆಮಾರಿ ಜಾತಿಗಳನ್ನು ಗುರುತಿಸಿ ಷೆಡ್ಯೂಲ್4 ಮಾಡಬೇಕು. ಸ್ವಶ್ಯ ಜನಾಂಗ 4 ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವುದಾದರೆ ಅಲೆಮಾರಿ ಬುಡುಕಟ್ಟು ಸಮುದಾಯಗಳಿಗೆ ಷೆಡ್ಯೂಲ್-3 ಎಂದು ಪರಿಗಣಿಸಬೇಕು. ಲಂಬಾಣಿ ಅಭಿವೃದ್ದಿ ನಿಗಮ, ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದಂತೆ ಅಸ್ಪೃಶ್ಯ ಜನಾಂಗ ಪ್ರಮುಖ ಜಾತಿಗಳಾದ ಮಾದಿಗ (ಆದಿಜಾಂಭವ) ಅಭಿವೃದ್ಧಿ ನಿಗಮ, ಛಲವಾದಿ (ಹೊಲೆಯ) ಅಭಿವೃದ್ಧಿ ನಿಗಮ, ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಈಗಿರುವ ಭಾರತೀಯ ಪರಿಶಿಷ್ಟ ಜಾತಿಗಳ ಆಯೋಗ ಭಾರತೀಯ ಪರಿಶಿಷ್ಟ ಪಂಗಡಗಳ ಆಯೋಗದಂತೆ ಭಾರತೀಯ ಅಲೆಮಾರಿ ಬುಡಕಟ್ಟು ಸಮುದಾಯಗಳ ಆಯೋಗವನ್ನು ರಚಿಸಬೇಕು ಎಂದು ವರದಿಯನ್ನು ಸಲ್ಲಿಸಿದೆ.