ತೆಂಗಿನ ಬೆಳೆ ನೆಚ್ಚಿಕೊಂಡಿದ್ದ ರೈತ ಕಂಗಾಲು
ಕ.ಪ್ರ. ವಾರ್ತೆ ಕುಣಿಗಲ್ ಜು.9
ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ, ತಾಲೂಕಿನ ಕೊತ್ತಗೆರೆ ಹಾಗೂ ಯಡೆಯೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ, ಹಲವು ಕಾರಣಗಳಿಂದ ಹಾನಿಗೊಂಡಿರುವ ತೆಂಗು ಹಾಗೂ ಅಡಿಕೆ ತೋಟಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಮಾಹಿತಿ ಪಡೆದರು.
ಮಂಗಳವಾರ ಬೆಳಗ್ಗೆ ನಾಗಮಂಗಲ, ತುರುವೆಕೆರೆ ತಾಲೂಕಿಗೆ ತೆರಳುವ ಮಾರ್ಗ ಮಧ್ಯೆ ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳನ್ನು ಶಾಸಕ ಡಿ.ನಾಗರಾಜಯ್ಯ, ಪುತ್ರ ಜಿಪಂ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಡಾ.ಬಿ.ಎನ್.ರವಿ ಸ್ವಾಗತಿಸಿದರು.
ಬಳಿಕ ಪ್ರವಾಸಿಮಂದಿರದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾಗರಾಜ್ರೊಂದಿಗೆ ಚರ್ಚಿಸಿದಾಗ, ತಾಲೂಕಿನಲ್ಲಿ 1200 ಹೆಕ್ಟೇರ್ ಅಡಿಕೆಬೆಳೆ ಪೈಕಿ 400 ಹೆಕ್ಟೇರ್ ಅಡಿಕೆ ಬೆಳೆ ನಾಶವಾದರೆ, 6000 ಸಾವಿರ ಹೆಕ್ಟೇರ್ ತೆಂಗಿನ ಬೆಳೆ ಪೈಕಿ 1500 ಹೆಕ್ಟೇರ್ ಬೆಳೆ ಸಂಪೂರ್ಣನಾಶಗೊಂಡಿದೆ ಎಂದು ವಿವರಿಸಿದರು.
ಶೋಚನೀಯ: ಪ್ರವಾಸಿ ಮಂದಿರದಲ್ಲಿ ಮಾಹಿತಿ ಪಡೆದ ನಂತರ ಮಾಜಿ ಪ್ರಧಾನಿ, ತಾಲೂಕಿನ ಕೊತ್ತಗೆರೆ ಹೋಬಳಿಯ ತೇರದಕುಪ್ಪೆ ಸಮೀಪದ ಚಿಕ್ಕಶಾನಯ್ಯನಪಾಳ್ಯ, ತರೇದಕುಪ್ಪೆ, ಎಡೆಯೂರು ಹೋಬಳಿಯ ಹೊಸೂರು ಸಮೀಪದಲ್ಲಿ, ವಿವಿಧ ಕಾರಣಗಳಿಂದ ನಾಶಗೊಂಡಿರುವ ತೆಂಗು, ಅಡಿಕೆ ತೋಟಕ್ಕೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ತೆಂಗು, ಅಡಿಕೆ ರೈತರ ಆರ್ಥಿಕ ಸ್ವಾವಲಂಬನೆಯ ಬೆನ್ನುಲುಬಾಗಿದೆ, ದುರಂತ ಎಂದರೆ ನುಸಿರೋಗ, ಕೆಂಪುತಲೆಹುಳ, ಕಪ್ಪುಚುಕ್ಕೆರೋಗ ಸೇರಿದಂತೆ ವಿವಿಧ ರೋಗಗಳ ಬಾಧೆ ಹಾಗೂ ಸತತ ಎರಡು ವರ್ಷಗಳಿಂದ ಕಾಡುತ್ತಿರುವ ಭೀಕರ ಬರಗಾಲದಿಂದ, ತೆಂಗಿನ ಬೆಳೆ ನೆಚ್ಚಿಕೊಂಡಿದ್ದ ರೈತ ಕಂಗಾಲಾಗಿದ್ದಾನೆ. ತೆಂಗಿನಮರವಿದ್ದರೆ ಹೇಗೊ ರೈತನ ಜೀವನ ನಿರ್ವಹಣೆ ಯಾಗುತ್ತಿತ್ತು. ಆದರೆ, ಈಗ ಹಲವು ಕಾರಣಗಳಿಂದ ಬೆಳೆನಾಶಗೊಂಡು ಪರದಾಡುವಂತಾಗಿದೆ. ದೊಡ್ಡ, ದೊಡ್ಡ ಪ್ರಮಾಣದಲ್ಲಿ ತೆಂಗಿನ ಬೆಳೆ ಕೈಗೊಂಡವರು ಹೇಗೊ ಸುಧಾರಿಸಿಕೊಳ್ಳುತ್ತಾರೆ, ಸಣ್ಣ, ಅತಿ ಸಣ್ಣ ರೈತರ ಪಾಡು ನಿಜಕ್ಕೂ ಶೋಚನೀಯ ಎಂದರು.
ಅಡಿಕೆ ಬೆಳೆ ನಾಶ: ತೆಂಗಿನ ಬೆಳೆ ಜೊತೆ ಅಡಿಕೆ ಬೆಳೆಯು ಸಹ ನಾಶಗೊಳ್ಳುತ್ತಾ ಸಾಗಿರುವುದು, ಇದನ್ನು ಅವಲಂಬಿಸಿರುವ ರೈತರ ಬವಣೆಯ ಬಗ್ಗೆ ಮಮ್ಮಲ ಮರುಗಿದ ಮಾಜಿ ಪ್ರಧಾನಿ, ತಾವೇ ಸ್ವತಹ ತೋಟಕ್ಕೆ ಇಳಿದು ತೆಂಗಿನ ಮರದ ಬುಡದಲ್ಲಿ, ರೋಗಕ್ಕೆ ಬಲಿಯಾಗಿ ಉದುರಿಬಿದ್ದ ತೆಂಗಿನಬುಡ್ಡೆಗಳನ್ನು ಕೈಗೆತ್ತಿಕೊಂಡು, ರೈತರ ಪಾಡು ಈ ಮಟ್ಟಕ್ಕೆ ಬಂದಿದೆ. ಇದು ಕುಣಿಗಲ್ ತಾಲೂಕಿನ, ತುಮಕೂರು ಜಿಲ್ಲೆಯ ಅಥವಾ ರಾಜ್ಯದ ಸಮಸ್ಯೆ ಅಲ್ಲ. ಇಡೀ ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆ, ರೈತರ ಸಂಕಷ್ಟಕ್ಕೆ, ಕೈಹಿಡಿಯಬೇಕಾದ್ದು ಸರ್ಕಾರದ ಮಹತ್ತರ ಹೊಣೆಯಾಗಬೇಕಿದೆ. ಕೇರಳ ರಾಜ್ಯದಲ್ಲಿ ಅಡಿಕೆ ಮರವೊಂದಕ್ಕೆ ಎಂಟುಸಾವಿರ, ತೆಂಗಿನಮರವೊಂದಕ್ಕೆ ಹನ್ನೆರಡು ಸಾವಿರ ರು. ಪರಿಹಾರ ನೀಡುತ್ತಿದೆ. ಈ ರಾಜ್ಯದಲ್ಲಿ ತೆಂಗಿಗೆ 75ರು, ಅಡಿಕೆ ಮರಕ್ಕೆ 50ರು. ಪರಿಹಾರ ನೀಡುತ್ತಿರುವ ಅವೈಜ್ಞಾನಿಕ ಪದ್ಧತಿ ಸೇರಿದಂತೆ, ತೆಂಗು, ಅಡಿಕೆ ಬೆಳೆಯನ್ನು ನಂಬಿ ಬದುಕು ಕಟ್ಟಿಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ದಿಸೆಯಲ್ಲಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ತಾಲೂಕು ಸೇರಿದಂತೆ ರಾಜ್ಯದಾದ್ಯಂತ ವಿವಿಧೆಡೆ ತಿರುಗಿ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮಂಡಿಸಿ, ಸೂಕ್ತ ಕ್ರಮ ಕೈಗೊಳ್ಳಲು ದಿನವೊಂದಕ್ಕೆ ನಾಲ್ಕು ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಆಮೂಲಾಗ್ರ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹೇಳಿದರು.
ಶಾಸಕರಾದ ಚಲುವರಾಯಸ್ವಾಮಿ, ಎಂ.ಟಿ.ಕೃಷ್ಣಪ್ಪ, ತಾಪಂ ಸದಸ್ಯ ರಾಮಣ್ಮ, ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಬಸವರಾಜು, ಪುರಸಭಾ ಸದಸ್ಯರಾದ ಚಂದ್ರಶೇಖರ್, ಈ.ಮಂಜು, ಸತೀಶ, ಅನ್ಸರ್ ಪಾಶ, ತಹಸೀಲ್ದಾರ್ ಜಗದೀಶ್, ತಾಪಂ ಇಒ ಡಾ.ರಾಮಚಂದ್ರಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.