ಭಾರೀ ನಷ್ಟವಾಗಿದೆ: ಯಾರನ್ನ ಕೇಳೋಣ ಸ್ವಾಮಿ
ಕುಣಿಗಲ್: ಸ್ವಾಮಿ... ಮೊದ್ಲೆ ಮಳೆ ಇಲ್ಲ, ಕಷ್ಟಪಟ್ಟು ಕಳೆದ ಹಲವು ವರ್ಷದಿಂದ ಬೆಳೆದಿದ್ದ 400 ತೆಂಗಿನಮರ, ಆರುನೂರು ಅಡಿಕೆಮರ ಬೆಳೆಸಲು ಬೋರ್ ಕೊರೆಸಿ, ಹಗಲಿರಳು ಕಷ್ಟ ಪಟ್ರು, ಬೆಳೆ ಉಳಿಸಕ್ಕಾಗಲಿಲ್ಲ. ಎಲ್ಲವೂ ನೆಲಕ್ಕೆ ಒರಗಿ ಹೋಯಿತು, ಲಕ್ಷಾಂತರ ರು. ನಷ್ಟ ಆಗೈತೆ, ಯಾರ್ನ ಕೇಳೋಣ ಸ್ವಾಮಿ ಎಂದು, ತರೇದಕುಪ್ಪೆರೈತ ಮಾಜಿ ಪ್ರದಾನಿ ದೇವೆಗೌಡರ ಬಳಿ ಮೊರೆ ಇಟ್ಟರು.
ಮಂಗಳವಾರ, ತಾಲೂಕಿನ ವಿವಿಧೆಡೆ ತೆಂಗು, ಅಡಿಕೆ ಬೆಳೆ ಹಾನಿಯ ಬಗ್ಗೆ ಪರಿಶೀಲಿಸಲು ಆಗಮಿಸಿದ ದೇವೆಗೌಡರು, ರೈತರೊಂದಿಗೆ ಚರ್ಚೆಗೆ ಮುಂದಾದಾಗ, ರೈತ ರಂಗಯ್ಯ ಮೇಲಿನಂತೆ ಮಾಜಿ ಪ್ರದಾನಿಗಳಲ್ಲಿ ತಮ್ಮ ಅಹವಾಲು ಮುಂದಿಟ್ಟು, ಕಷ್ಟ ಪಟ್ಟು ಬೆಳೆದ ಬೆಳೆ ನಷ್ಟವಾಗಿದೆ, ಪರಿಹಾರಕ್ಕೆ ಯಾರನ್ನು ಕೇಳಬೇಕೆಂಬುದೇ ತಿಳಿಯುತ್ತಿಲ್ಲ, ನಾವೇ ಬೆಳೆಸಿದ ಮರಕ್ಕೆ ಹೆಂಗೇ ಕೊಡಲಿ ಹಾಕೊದು, ಏನೊಂದು ತೋಚುತ್ತಿಲ್ಲ ಸ್ವಾಮಿ ಎಂದರು.
ಶಕ್ತಿ ಮೀರಿ ಹೋರಾಡುವೆ: ರೈತನನ್ನು ಸಮಾಧಾನಪಡಿಸಿದ ಮಾಜಿ ಪ್ರಧಾನಿ, ಯಾವುದೇ ಕಾರಣಕ್ಕೂ ಹಾನಿಗೊಳಗಾಗಿರುವ ತೆಂಗು, ಅಡಿಕೆ ಮರಗಳನ್ನು ಕತ್ತರಿಸುವುದು ಬೇಡ. ಸಾಧ್ಯವಿರುವ ಪರಿಹಾರ ಕೊಡಿಸಲು ಶಕ್ತಿ ಮೀರಿ ಹೋರಾಡುವುದಾಗಿ ತಿಳಿಸಿದರು. ಶಾಸಕ ಡಿ.ನಾಗರಾಜಯ್ಯ, ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ರೈತರ ಜಮೀನಿನ ಪಹಣಿಯಲ್ಲಿ, ಬೆಳೆ ಕಾಲಂಗಳಲ್ಲಿ ಯಾವುದೇ ಮರವನ್ನು ನಮೂದಿಸುತ್ತಿಲ್ಲ. ಇದರಿಂದಾಗಿ, ತೆಂಗಿನ ಬೆಳೆಹಾನಿಯಾದ ರೈತನಿಗೆ ನಫೆಡ್ ಅಥವಾ ಇನ್ನಾವುದೊ ಸಂಸ್ಥೆಯ ನೆರವನ್ನು ಪಡೆಯಲು ಆಗುವುದಿಲ್ಲ ಮತ್ತು ಬೆಳೆ ಬೆಳೆದರೆ, ನಾಪೆಡ್ಗೆ ಮಾರಲು ತೊಂದರೆಯಾಗುತ್ತಿದೆ, ಇನ್ನು ಅಡಿಕೆ ಮರಗಳನ್ನು ಸಹ ನಮೂದು ಮಾಡದಿರುವ ಕಾರಣ ರೈತರು, ಬೆಳೆ ನಷ್ಟವಾದರೆ ಪರಿಹಾರ ಕೇಳಲು ಆಗದೆ, ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಇನ್ನಾದರೂ ಈ ನಿಟ್ಟಿನಲ್ಲಿ ಮರಗಳನ್ನು ಪಹಣಿಯಲ್ಲಿ ನಮೂದು ಮಾಡಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಬೇಕೆಂದು ಮಾಜಿ ಪ್ರಧಾನಿಗಳಿಗೆ ಮನವಿ ಮಾಡಿದರು.