ಅಲೆಮಾರಿಗಳ ನಿಗಮ ಸ್ಥಾಪನೆಗೆ ಆಗ್ರಹ
ಕ.ಪ್ರ.ವಾರ್ತೆ ತುಮಕೂರು ಜು.1
ಪ್ರಗತಿಪರ ಸಂಘಟನೆಗಳ ವೇದಿಕೆ ಪಿಯುಸಿಎಲ್, ತುಮಕೂರು ಅಲೆಮಾರಿ ಬುಡಕಟ್ಟು ಮಹಾಸಭಾ, ಸಿಐಟಿಯು ಮತ್ತು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಂಟಿಯಾಗಿ ಅಲೆಮಾರಿಗಳ ನಿಗಮಕ್ಕೆ ಒತ್ತಾಯಿಸಿ ಟೌನ್ಹಾಲ್ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ರಾಜ್ಯದಲ್ಲಿರುವ ಅಲೆಮಾರಿಗಳ ಸಮೀಕ್ಷೆ ಮಾಡಲು ಒತ್ತಾಯಿಸಿ ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ ನಿಗಮವನ್ನು ಘೋಷಿಸಲು ಆಗ್ರಹಿಸಿ ವಿವಿಧ ಹಕ್ಕೊತ್ತಾಯಗಳೊಂದಿಗೆ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಮೂಲನಿವಾಸಿಗಳು: ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಸ್ಲಂ ಜನಾಂದೋಲನಾ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿಯವರು ಅಲೆಮಾರಿಗಳು ಭಾರತ ದೇಶದ ಮೂಲನಿವಾಸಿಗಳಾಗಿದ್ದು ನಾಗರಿಕ ಸಮಾಜ ಹುಟ್ಟಲು ಕಾರಣರಾಗಿದ್ದಾರೆ. ನಾಗರಿಕತೆಗೆ ಕೊಡುಗೆಯನ್ನು ನೀಡಿದ ಅಲೆಮಾರಿಗಳನ್ನೇ ಇಂದು ನಾಗರೀಕ ಸವಲತ್ತುಗಳಿಂದ ವಂಚಿಸಿರುವುದು ವಿಪರ್ಯಾಸವಾಗಿದೆ ಎಂದರು.
ಅಪಚಾರ: ಇಡೀ ದೇಶದಲ್ಲಿ 948 ಅಲೆಮಾರಿ ಬುಡಕಟ್ಟುಗಳಿದ್ದೂ ಕರ್ನಾಟಕದಲ್ಲಿ 37 ಅಲೆಮಾರಿ ಬುಡಕಟ್ಟಿನ 60 ಲಕ್ಷ ಜನರಿದ್ದಾರೆ. ಇದುವರೆಗೂ ಅಲೆಮಾರಿಗಳಿಗೆ ನಾಗರಿಕ ಸೌಲಭ್ಯ ನೀಡದಿರುವುದು ಈ ದೇಶದ ಸಂವಿಧಾನಬದ್ಧ ಸೌಲಭ್ಯಗಳಿಂದ ವಂಚಿಸಿರುವುದು ಅಲೆಮಾರಿಗಳಿಗೆ ಎಸಗಿರುವ ಅಪಚಾರವೇ ಎಂದರು.
ಈ ಶ್ರೇಣೀಕೃತ ಜಾತಿಯಲ್ಲಿ ಅತ್ಯಂತ ನಿಕೃಷ್ಟ ಜೀವನ ನಡೆಸುತ್ತಿರುವ ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ನಲ್ಲಿ ಪ್ರತ್ಯೇಕ 200 ಕೋಟಿ ರು.ಗಳ ಅನುದಾನವನ್ನು ಮೀಸಲಿಡಬೇಕೆಂದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಂಡ ಅಲೆಮಾರಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರು, ಅಲೆಮಾರಿಗಳ ಮಹಾಸಭಾದ ಬಾಲಗುರುಮೂರ್ತಿ ಅವರು ಅಲೆಮಾರಿಗಳ ತಮ್ಮ ಕುಲಕಸುಬನ್ನು ನಂಬಿ ಬದುಕುತ್ತಿರುವ ನಮಗೆ ಜೀವನೋಪಾಯಕ್ಕಾಗಿ ಸಾಕುವ ಹಂದಿಗಳನ್ನು ನಗರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಹಂದಿಗಳನ್ನು ಕದ್ದೊಯ್ದು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತ ಕ್ರಮವಹಿಸಿಬೇಕು, ಹಂದಿ ಸಾಕಾಣಿಕೆಗೆ ನಗರದ ಹೊರವಲಯದಲ್ಲಿ ಭೂಮಿ ನೀಡಬೇಕೆಂದರು. ಅಲೆಮಾರಿಗಳ ಜನಸಂಖ್ಯೆಗನುಗುಣವಾಗಿ ಬಜೆಟ್ನಲ್ಲಿ ಹಣ ಮೀಸಲಿಡಬೇಕು. ಅಲೆಮಾರಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಮೂರ್ತಿಯವರು ಜಿಲ್ಲಾಡಳಿತದಿಂದ ತೆಗೆದುಕೊಳ್ಳುವ ಮನವಿ ಬಗ್ಗೆ ಪ್ರಗತಿಪರ ಸಂಘಟನೆಗಳ ಸಭೆಯನ್ನು ಇನ್ನು ಹತ್ತು ದಿನಗಳೊಳಗಾಗಿ ಕರೆದು ಬಗೆಹರಿಸುವುದಾಗಿ ತಿಳಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಅವರಿಗೂ ದೂರು ನೀಡಲಾಯಿತು. ಪ್ರತಿಭಟನಾ ನೇತೃತ್ವವನ್ನು ಜಿಲ್ಲಾ ಅಲೆಮಾರಿ ಮಹಾ ಸಭಾದ ಅಧ್ಯಕ್ಷೆ ರಾಮಕ್ಕ, ಕೊಳಗೇರಿ ಸಮಿತಿಯ ಕಾರ್ಯದರ್ಶಿ ಸೈಯದ್ ಅಲ್ತಾಫ್, ಹಂದಿ ಜೋಗಿ ಸಂಘದ ಅಧ್ಯಕ್ಷರಾದ ಗೋಪಿ, ಅಲೆಮಾರಿ ಮಹಾಸಭಾದ ಪದಾಧಿಕಾರಿಗಳಾದ ರಾಜಪ್ಪ, ಬಷೀರ್, ಮನೋಹರ್, ಶ್ರೀನಿವಾಸ್ ಮೂರ್ತಿ, ದೊಡ್ಡ ಆದಪ್ಪ, ರತ್ನಮ್ಮ, ಕೊಳಗೇರಿ ಸಮಿತಿಯ ಶೆಟ್ಟಳಯ್ಯ, ರಾಮಯ್ಯ, ಅರುಣ, ರಘು, ಗಾಯಿತ್ರಿ, ಶ್ರುತಿ ಮತ್ತಿತರರು ವಹಿಸಿದ್ದರು.