ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನ್ನನ ಯಶೋಧರ ಚರಿತೆ ಇಂದಿಗೂ ಪ್ರಸ್ತುತ

Rashmi Kasaragodu
Updated On : 11 Jul 2013, 1:02 am

ಕ.ಪ್ರ.ವಾರ್ತೆ   ತುಮಕೂರು   ಜು.9
ಜೀವ ದಯೆಯೇ ಧರ್ಮ, ದಯೆಯೇ ಧರ್ಮದ ಮೂಲ ಎಂದು ಸಾರುವ ಜನ್ನನ ಯಶೋಧರ ಚರಿತೆ ಇಂದಿನ ಪ್ರಕ್ಷುಬ್ಧ ವಾತಾವರಣದಲ್ಲಿ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಅಭಿಪ್ರಾಯಪಟ್ಟರು.
ತುಮಕೂರಿನ ತ್ರಿಶಲಾ ಜೈನ್ ಮಹಿಳಾ ಮಿಲನ್ ಆಯೋಜಿಸಿದ್ದ ಜನ್ನನ ಯಶೋಧರ ಚರಿತೆ ಮತ್ತು ಮಾನವ ಧರ್ಮ  ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಮೊದಲ ಉಪಲಬ್ಧ ಕೃತಿ, ಮೊದಲ ಗದ್ಯಕೃತಿ ಹಾಗೂ ಮೊದಲ ಕಾವ್ಯವನ್ನು ನೀಡಿದ ಹಿರಿಮೆ ಜೈನ ಕವಿಗಳದ್ದಾಗಿದೆ. ಇಂಥ ಜೈನ ಪರಂಪರೆಯ ಪ್ರಮುಖ ಕವಿ ಜನ್ನ. ಅವನ ಯಶೋಧರ ಚರಿತೆ ಅನುವಾದಿತ  ಕೃತಿಯಾದರೂ ಸ್ವಂತಿಕೆಯನ್ನೊಳಗೊಂಡಿದೆ.
ಮಾನವ ಧರ್ಮ ಮಿಗಿಲು: ಯಶೋಧರ ಚರಿತೆ ವಿಷಮ ದಾಂಪತ್ಯದ ಲೌಕಿಕ ಕಥಾನಕವನ್ನು ಒಳಗೊಂಡರೂ  ಹಿಂಸೆಯ ದುಷ್ಪಲ, ಅಹಿಂಸೆಯ ಸತ್ಫಲವನ್ನು  ಬಿತ್ತರಿಸಿ ಅಹಿಂಸೆಯ ಮಹತ್ವವನ್ನು ಸಾರುತ್ತದೆ. ಸಾರ್ವಕಾಲಿಕ ಮೌಲ್ಯವಾಗಿರುವ ಅಹಿಂಸೋ ಪರಮೋ ಧರ್ಮವನ್ನು ಸಾರುವ ಯಶೋಧರ ಚರಿತೆಯಲ್ಲಿ ಧರ್ಮಕ್ಕಿಂತ ಮಾನವಧರ್ಮ ಮಿಗಿಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಶಾಂತಾ ಸನ್ಮತಿಕುಮಾರ್, ಜಲಜ ಜೈನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತ್ರಿಶಲಾ ಜೈನ್ ಮಹಿಳಾ ಮಿಲನ್ನ ಅಧ್ಯಕ್ಷೆ ಆಶಾ ವಿಜಯಕುಮಾರ್, ಕಾರ್ಯದರ್ಶಿ ಸುಚಿತ್ರಾ ಮಹಾವೀರ್, ಮಂಜುಳ ಸುಮೀರ್ ಮುಂತಾದವರು ಉಪಸ್ಥಿತರಿದ್ದರು. ಸುಮತಿಕುಮಾರ್ ಸ್ವಾಗತಿಸಿದರು. ಸುಜಾತಾ ಸುಮತಿಕುಮಾರ್ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement