ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಕೆ.ಮಂಜುಗೆ ಜಾಮೀನು
ತುರುವೇಕೆರೆ: ತಾಲೂಕಿನ ಜನರಿಗೆ ತಿರುಪತಿ ವೆಂಕಟರಮಣ ದೇವರ ಕಲ್ಯಾಣೋತ್ಸವವನ್ನು ತೋರಿಸುವ ಸಲುವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಡಿ ಚಲನಚಿತ್ರ ನಿರ್ಮಾಪಕ ಕೆ.ಮಂಜು ಅವರ ವಿರುಧ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಮಂಜು ಅವರು ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಕಾರಣ ವಾರಂಟ್ ಸಹ ಹೊರಡಿಸಲಾಗಿತ್ತು. ಸೋಮವಾರ ಖುದ್ದಾಗಿ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಕೆ.ಮಂಜುರವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವೆಂಕಟೇಶ್ವರ ಕಲ್ಯಾಣ ಮಹೋತ್ಸವ ಸಮಾರಂಭದಲ್ಲಿ ರಾತ್ರಿ 10 ರವರೆಗೆ ಮಾತ್ರ ಸಮಾರಂಭ ನಡೆಸಬೇಕೆಂದು ಹಾಗೂ ಧ್ವನಿವರ್ಧಕವನ್ನು ಬಳಸಬೇಕೆಂದೂ ಸೂಚನೆ ನೀಡಲಾಗಿತ್ತು. ಆದರೆ ಸೂಚನೆ ಮೀರಿಯೂ ಸಮಾರಂಭ ನಡೆಸಲಾಗಿತ್ತು ಎಂದು ಚುನಾವಣಾಧಿಕಾರಿಯಾಗಿದ್ದ ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಲಿಂಗರಾಜಪ್ಪ ಕೆ.ಮಂಜುರವರ ವಿರುಧ್ದ ದೂರು ದಾಖಲು ಮಾಡಿದ್ದರು.