'ಸಾರ್ವಜನಿಕರ ಸೇವೆಯನ್ನು ನಿಷ್ಠೆಯಿಂದ ಮಾಡಿ'
ಕ.ಪ್ರ.ವಾರ್ತೆ ಕೊರಟಗೆರೆ ಜು.8
ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಸೌಹಾರ್ದತೆಯಿಂದ ಸಾರ್ವಜನಿಕರ ಸೇವೆಯನ್ನು ನಿಷ್ಠೆಯಿಂದ ಮಾಡಿದರೆ ಬಡವರಿಗೆ ಸೌಲಭ್ಯಗಳು ನೇರವಾಗಿ ತಲುಪುತ್ತದೆ. ಹೀಗಾಗಿ ಸಮಾಜದ ಏಳಿಗೆ ಸಾಧ್ಯ ಎಂದು ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಗುರುಭವನದಲ್ಲಿ ಸರ್ಕಾರಿ ನೌಕರರ ಸಂಘ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಜನರ ಪರವಾಗಿ ಕೆಲಸ ಮಾಡಲು ನೌಕರರ ಸಹಕಾರ ಅಗತ್ಯವಿದ್ದು ನೌಕರರ ಕಾರ್ಯದಕ್ಷತೆಯೇ ಸರ್ಕಾರದ ಯೋಜನೆಗಳ ಯಶಸ್ಸಿಗೆ ಕಾರಣ ಎಂದರು.
ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸುವುದು ಉತ್ತಮವಾದ ಕೆಲಸವಾಗಿದ್ದು ಪ್ರತಿಭಾವಂತ ಮಕ್ಕಳ ಏಳಿಗೆಗೆ ಪೋಷಕರ ಪಾತ್ರ ಮಹತ್ವವಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳ ಪೋಷಕರು ಬಡವರಾಗಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಗೊಂದಲ ಸೃಷ್ಟಿ: ರಾಜ್ಯ ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ ಮಾತನಾಡಿ ಸರ್ಕಾರವು ಜನಸಂಖ್ಯಾ ಅನುಗುಣವಾಗಿ ನೌಕರರನ್ನು ನೇಮಕಾತಿ ಮಾಡಿಕೊಳ್ಳ ಬೇಕಾಗಿದ್ದು ನೌಕರನಿಗೆ ಅಗತ್ಯಕಿಂತ ಹೆಚ್ಚು ಕೆಲಸದ ಹೊರೆಯನ್ನು ಸರ್ಕಾರ ನೀಡುತ್ತಿದ್ದು ಅದನ್ನು ಮೀರಿದಾಗ ಬೇರೆ ಕಡೆ ಕಂಪನಿಗಳಿಂದ ಸರ್ಕಾರಿ ಕೆಲಸಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವುದರಿಂದ ಭ್ರಷ್ಟಾಚಾರ ಹೆಚ್ಚಾಗಿ ಆ ಯೋಜನೆಗಳು ಸರಿಯಾದ ಕಾರ್ಯ ರೂಪಕ್ಕೆ ಬರದೆ ಗೊಂದಲ ಸೃಷ್ಟಿಯಾಗುತ್ತವೆ. ಪ್ರಸ್ತುತ ಪಡಿತರ ಚೀಟಿ ಯೋಜನೆ ಹಾಗೂ ಜಾತಿ ವರಮಾನ ಪ್ರಮಾಣ ಪತ್ರದ ಅವ್ಯವಸ್ಥೆಯೆ ಸ್ಪಷ್ಟ ನಿದರ್ಶನ ಎಂದರು.
ಉತ್ತಮ ಸಮಾಜ ನಿರ್ಮಾಣ: ಸಮಾಜದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ನಾಲ್ಕು ಅಂಗಗಳು ಸಮರ್ಥವಾಗಿ ಅನ್ಯೋನ್ಯವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಈಗ ವರ್ಗಾವಣೆ ಪ್ರಕ್ರಿಯೆ ರಾಜ್ಯದಲ್ಲಿ ಜಾರಿಯಾಲ್ಲಿರುವುದರಿಂದ ಭ್ರಷ್ಟಾಚಾರವನ್ನು ತಪ್ಪಿಸಿಲು ಸರ್ಕಾರವು ವರ್ಗಾವಣೆ ಮಾರ್ಗಸೂಚಿಯಲ್ಲಿ ಏಕಪಕ್ಷ ನಿರ್ಣಯವನ್ನು ಪಾಲಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಮುಖ್ಯ ಮಂತ್ರಿಗಳು ಸ್ಪಂದಿಸಿರುವುದು ಸ್ವಾಗತಾರ್ಹ ಎಂದರು.
ಭವಿಷ್ಯದ ದಿಕ್ಸೂಚಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾಮಹಾಲಿಂಗಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಮುಂದಿನ ಭವಿಷ್ಯದ ದಿಕ್ಸೂಚಿಯಾಗಿದ್ದು ನಿರ್ದಿಷ್ಟ ಗುರಿಸಾಧಿಸಲು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ವಿದ್ಯಾರ್ಥಿಗಳು ಇದರ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನ ಅತ್ಯವಶ್ಯಕ ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರಕ್ಯಾತರಾಯ ಮಾತನಾಡಿ ಕಳೆದ 20 ವರ್ಷಗಳಿಂದ ಸಂಘವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಿಕೊಂಡು ಬರುವುದರೊಂದಿಗೆ ನೆರೆ ಸಂತ್ರಸ್ತರ ನಿಧಿಗೆ ಮತ್ತು ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಒಂದು ದಿನದ ವೇತನವನ್ನು ನೀಡಿದ್ದು ಉತ್ತಮ ಅನ್ನಧಾತ ಎಂದು ರೈತರನ್ನು ಸನ್ಮಾನಿಸುವ ಕೆಲಸವನ್ನು ಸಹ ಸಂಘ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಸರ್ಕಾರಿ ನೌಕರರ ರಾಜ್ಯ ಸಂಘದ ಕಾರ್ಯದರ್ಶಿ ಪಟೇಲ್ ಪಾಂಡು, ಖಜಾಂಚಿ ಯೋಗಾನಂದ್, ಶಂಕರ್ ಲಿಂಗಯ್ಯ, ಜಿ.ಪಂ.ಸದಸ್ಯೆ ದಾಕ್ಷಾಯಿಣಿ ರಾಜಣ್ಣ, ತಾ.ಪಂ.ಅಧ್ಯಕ್ಷೆ ಅನಿತಾ ಅಶ್ವತ್ಥ್, ಪ.ಪಂ.ಸದಸ್ಯ ಕೆ.ಎಲ್. ಆನಂದ್, ಅಶ್ವತ್ಥ್ , ಕೆ.ಸಿ. ಪಾಂಡುರಂಗ, ರಮೇಶ್, ಟಿ.ಕೆ. ವಿಜಯನಾರಸಿಂಹ, ಎಲ್. ಕಾಮಯ್ಯ ಉಪಸ್ಥಿತರಿದ್ದರು.