ಆರೋಗ್ಯ ಸಂರಕ್ಷಣೆಯಲ್ಲಿ ಬೇಜವಾಬ್ದಾರಿ ಬೇಡ
ತುರುವೇಕೆರೆ: ಆರೋಗ್ಯ ಸುಧಾರಣೆ ಮಾಡಿಕೊಳ್ಳುವಲ್ಲಿ ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ತೋರಬಾರದು ಎಂದು ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಕಿವಿ ಮಾತು ಹೇಳಿದರು.
ತಾಲೂಕಿನ ಮಣೆಚೆಂಡೂರಿನಲ್ಲಿ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಗ್ರಾಮ ಪಂಚಾಯ್ತಿ ಜಿಲ್ಲಾ ಪಂಚಾಯಿತಿ ಸದಸ್ಯರ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗಳು ಅತ್ಯಂತ ದುಬಾರಿಯಾಗಿರುವ ಕಾಲವಾಗಿದೆ. ವೈದ್ಯಕೀಯ ನೆರವು ಸಿಗುವುದು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದ್ದರೂ ಸಹ ಹಲವಾರು ವೈದ್ಯರು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡುವುದೇ ಇಲ್ಲ. ಇಂತಹ ಸ್ಥಿತಿಯಲ್ಲಿ ಆದಿಚುಂಚನಗಿರಿ ಮಠ ಜನಸಾಮಾನ್ಯರಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಕಡಿಮೆ ಇದ್ದು ಸಾರ್ವಜನಿಕರಿಗೆ ಹೆಚ್ಚು ಸೇವೆ ದೊರೆಯಲಿ ಎಂಬ ಕಾರಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರು ಗ್ರಾಮಾಂತರದಲ್ಲೇ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡಿ ಜನರಿಗೆ ಸೇವೆ ನೀಡುತ್ತಿದ್ದಾರೆ ಎಂದು ಶಿವಕುಮಾರನಾಥ ಸ್ವಾಮೀಜಿ ಹೇಳಿದರು.
ಮುಂಜಾಗರೂಕತೆ ವಹಿಸಿ: ಗ್ರಾಮೀಣ ಪ್ರದೇಶದ ಜನರೂ ಸಹ ಆರೋಗ್ಯದ ಕಡೆ ಗಮನ ಹರಿಸಬೇಕು. ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಉತ್ತಮ ಆಹಾರವನ್ನು ಸ್ವೀಕರಿಸಬೇಕು. ಯಾವುದಾದರೂ ಕಾಯಿಲೆ ಬಂದಲ್ಲಿ ಕೂಡಲೇ ಪ್ರಥಮ ಹಂತವಾಗಿ ವೈದ್ಯರಿಂದ ಸಲಹೆ ಪಡೆಯಬೇಕು. ರೋಗ ಉಲ್ಬಣಿಸದಂತೆ ಮುಂಜಾಗರೂಕತೆ ವಹಿಸಬೇಕು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪಿನ ಬಗ್ಗೆ ಅರಿವು ಪಡೆದಿರಬೇಕು. ಯಾವುದೇ ಕ್ಷಣದಲ್ಲಿ ರಕ್ತದ ಅವಶ್ಯಕತೆ ಬಂದಲ್ಲಿ ಗುಂಪಿನ ತಪಾಸಣೆ ಮಾಡುವ ಹಂತದಲ್ಲೇ ರೋಗಿಗಳ ಜೀವಕ್ಕೆ ಅಪಾಯ ಬರಬಹುದು ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ರಕ್ತದ ಗುಂಪಿನ ತಿಳುವಳಿಕೆ ಕುರಿತು ಸಂಘ ಸಂಸ್ಥೆಗಳು ಜಾಗೃತಿ ಉಂಟು ಮಾಡಬೇಕು. ರಕ್ತದ ಗುಂಪಿನ ಗುರುತಿನ ಪತ್ರವನ್ನೂ ನೀಡುವ ಕಾಯಕವಾಗಬೇಕಿದೆ ಎಂದು ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಗ್ರಾಮದ ಶ್ರೀನಿವಾಸ್ ಎಂಬುವವರು ಡೆಂಘೀ, ಚಿಕೂನ್ ಗುನ್ಯಾವನ್ನು ಬಾರದ ಹಾಗೂ ಬಂದ ನಂತರ ಪರಿಹರಿಸಿಕೊಳ್ಳುವ ಕುರಿತು ಲಾವಣಿ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದು ಗಮನಾರ್ಹವಾಗಿತ್ತು.
ತಾಲೂಕು ಪಂಚಾಯಿತಿ ಸದಸ್ಯೆ ಶಭನಭಿ ಮುಕ್ತಿಯಾರ್, ಮಣಿಚೆಂಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಬ್ಯಾಟಲಕ್ಷ್ಮಮ್ಮ, ಪಂಚಾಯ್ತಿ ಸದಸ್ಯರಾದ ಎಂ.ಜಿ.ಮುರುಳೀ ಮೋಹನ್, ಡಿ.ಶಿವಕುಮಾರ್, ಶಾಂತಮ್ಮ, ರತ್ಮಮ್ಮ, ಮುನಾವರ್ ಸಾಬ್, ಗೋವಿಂದಯ್ಯ, ನಟರಾಜ್, ರೆಹಮಾನ್ ಬಿ, ಶ್ರೀನಿವಾಸ್, ಲಕ್ಷ್ಮಮ್ಮ, ಇಂದಿರಮ್ಮ, ಭೈತರಹೊಸಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಧನಂಜಯ್, ಮಾಜಿ ಉಪಾಧ್ಯಕ್ಷ ಯಲ್ಲೇಗೌಡ, ಸದಸ್ಯರಾದ ಕೃಷ್ಣಮೂರ್ತಿ, ಕೀಲು ಮತ್ತು ನಾಡಿ ತಜ್ಞರಾದ ಡಾ.ಗೋಪ್ಯಾನಾಯಕ್, ಪಿಡಿಓ ನಾಗರಾಜು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಣ್ಣಯ್ಯ, ಗುತ್ತಿಗೆದಾರ ನಂಜುಂಡಯ್ಯ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವೈ.ಎಸ್.ಶಿವಕುಮಾರ್, ವೈ.ಪಿ. ಧರ್ಮೇಂದ್ರ ಮೊದಲಾದವರು ಭಾಗವಹಿಸಿದ್ದರು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಮುಖ್ಯೋಪಧ್ಯಾಯ ಚಂದ್ರಯ್ಯನವರು ಸ್ವಾಗತಿಸಿದರು. ಶಿಕ್ಷಕಿ ರೂಪಾ ನಿರೂಪಿಸಿದರು. ಸಿಆರ್ಪಿ ಮಂಜುನಾಥ್ ವಂದಿಸಿದರು.