ಕ್ರಿಮಿನಲ್ ಕೇಸ್, ಶಿಸ್ತುಕ್ರಮಕ್ಕೆ ಶಿಫಾರಸು
ಕನ್ನಡಪ್ರಭ ವಾರ್ತೆ ತುಮಕೂರು ಜು.11
ಗಂಗಾಕಲ್ಯಾಣ ಯೋಜನೆ ಅನುಷ್ಠಾನ ವಿಳಂಬಕ್ಕೆ ಕಾರಣರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಶಿಸ್ತುಕ್ರಮ ಜರುಗಿಸಲು ವಿಶೇಷ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಸಭೆಯನ್ನು ತುರ್ತಾಗಿ ಕರೆಯಲಾಗುವುದು ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ವೈ.ಎಚ್. ಹುಚ್ಚಯ್ಯ ಗುಡುಗಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಜೂನ್ ಅಂತ್ಯದವರೆಗಿನ ಮಾಸಿಕ ಜಿಪಂ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹುಚ್ಚಯ್ಯ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ವಿವಿಧ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಈ ಯೋಜನೆಯ ಬಡ ಫಲಾನುಭವಿಗಳಿಗೆ ಗಂಗೆಯೂ ಇಲ್ಲ, ಅವರ ಕಲ್ಯಾಣವೂ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ 2008ರಲ್ಲಿ ಮಂಜೂರಾಗಿರುವ ಕೊಳವೆಬಾವಿಗಳಿಗೆ ಈವರೆಗೆ ವಿದ್ಯುದ್ದೀಕರಣಗೊಳಿಸಿಲ್ಲ. ಈ ಬಗ್ಗೆ ಕೆಡಿಪಿ, ಸಾಮಾನ್ಯಸಭೆ, ಸ್ಥಾಯಿಸಮಿತಿ ಸಭೆಗಳಿಗೆ ಪ್ರತೀಬಾರಿ ಬೆಸ್ಕಾಂ ಮತ್ತು ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ವಂಚಿಸುತ್ತಿದ್ದಾರೆ. ಈ ಯೋಜನೆ ವಿಳಂಬಕ್ಕೆ ಸೂಕ್ತ ಕಾರಣ ನೀಡದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ (ಅಟ್ರಾಸಿಟಿ) ಪ್ರಕರಣ ದಾಖಲಿಸುವ ಅವಕಾಶ ಸಂವಿಧಾನದಲ್ಲಿದೆ ಎಂದು ಎಚ್ಚರಿಸಿದರು.
ಸುಳ್ಳು ಮಾಹಿತಿ: ಗಂಗಕಲ್ಯಾಣ, ಗ್ರಾಮೀಣ ನೀರು ಸರಬರಾಜು ಯೋಜನೆಗಳ ವಿದ್ಯುದ್ದೀಕರಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ವೇಳೆ ಬೆಸ್ಕಾಂ ಅಧಿಕಾರಿಗಳು ಹಾಗೂ 4 ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಸುಳ್ಳು, ಸುಳ್ಳು ಮಾಹಿತಿಗಳನ್ನು ನೀಡಿದರು. ಇದರಿಂದ ಕೆಂಡಾಮಂಡಲರಾದ ಜಿಪಂ ಅಧ್ಯಕ್ಷೆ ಪ್ರೇಮಾ ಹಾಗೂ ಹುಚ್ಚಯ್ಯ, ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗಂಗಕಲ್ಯಾಣ ಯೋಜನೆ ಬಗ್ಗೆ ಅಧಿಕಾರಿಗಳಿದ್ದು ಅದೇ ರಾಗ, ಅದೇ ಹಾಡು. ಬೆಸ್ಕಾಂನವರು ನಂಬಿಕೆ ದ್ರೋಹದ ಕೆಲಸ ಮಾಡಿದರೆ, ಅಭಿವೃದ್ಧಿ ನಿಗಮದ ಅಧಿಕಾರಿಗಳು ಬಡವರ ಅಭಿವೃದ್ಧಿ ವಂಚಿಸುವ ಕೃತ್ಯವೆಸಗಿರುವುದು ಅಕ್ಷಮ್ಯ ಅಪರಾಧ. ಇದರ ವಿರುದ್ಧ ಉಪವಾಸ ಸತ್ಯಾಗ್ರಹ ಹೋರಾಟಕ್ಕೂ ತಾವು ಸಿದ್ಧ ಎಂದು ಹುಚ್ಚಯ್ಯ ಅಬ್ಬರಿಸಿದರು.
ಮೊಕದ್ದಮೆ: ಸಮಾಜ ಕಲ್ಯಾಣ ಇಲಾಖೆ ಸಚಿವರನ್ನೇ ಕರೆಸಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಶೀಘ್ರವೇ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆ ಕರೆದು ಠರಾವು ಹೊರಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಶಿಸ್ತುಕ್ರಮ ಜರುಗಿಸಲು ಸಮಾಜಕಲ್ಯಾಣ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕುಣಿಗಲ್, ತುರುವೇಕೆರೆ, ತಿಪಟೂರು ತಾಲೂಕುಗಳಲ್ಲಿ ಸಂಪೂರ್ಣ ಒಣಗಿರುವ ತೆಂಗಿನ ತೋಟಕ್ಕೆ ಭೇಟಿ ನೀಡಿದ್ದು ಶೀಘ್ರ ಪ್ರತೀ ಮರವೊಂದಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಕ್ರಮಕೈಗೊಂಡಿದೆಯಾ ಎಂದು ಹುಚ್ಚಯ್ಯ ಪ್ರಶ್ನಿಸಿದರು. ಜಿಲ್ಲೆಯಲ್ಲಿ 1.42 ಲಕ್ಷ ಹೆಕ್ಟೇರ್ ತೆಂಗು ಬೆಳೆಯಲಾಗುತ್ತಿದೆ.
ಅಂತರ್ಜಲ ಕುಸಿದಿರುವುದರಿಂದ ತೆಂಗಿನ ಮರಗಳು ಒಣಗುತ್ತಿವೆ. ಹಾಗಾಗಿ, ಅಂತರಬೆಳೆ ಬೆಳೆಯಲು ರೈತರನ್ನು ಸಹ ಪ್ರೋತ್ಸಾಹಿಸಲಾಗಿದೆ. ಈ ಹಿಂದೆ ತೆಂಗಿನಮರಕ್ಕೆ 3 ರು.ನಂತೆ ವಿಮೆ ಹಣ ಯೋಜನೆ ಜಾರಿ ತರಲಾಗಿತ್ತು. ಮರ ಒಣಗಿದರೆ 600 ರಿಂದ 700 ರು. ಪರಿಹಾರ ಸಿಗುತ್ತಿತ್ತು. ಆದರೆ, ವಿಮೆ ಯೋಜನೆಗೆ ರೈತರು ಸ್ಪಂದಿಸಲಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಸಾದ್ ತಿಳಿಸಿದರು.
ಬಹುವಾರ್ಷಿಕ ಬೆಳೆ ಸಂಪೂರ್ಣ ಹಾಳಾದರೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ನಿಧಿಯಿಂದ 1 ಹೆಕ್ಟೇರ್ಗೆ 8 ಸಾವಿರ ಪರಿಹಾರ ಮೊದಲು ನೀಡಲಾಗುತ್ತಿದ್ದು ಈಗ 12 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಅಡಕೆ, ತೆಂಗು, ಬಾಳೆ ಗಿಡಗಳು ನಾಶವಾದರೆ 1 ಗಿಡಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. 1 ಹೆಕ್ಟೇರ್ಗೆ 120 ಗಿಡಗಳಂತೆ ಪರಿಗಣಿಸಿ ತೋಟಗಾರಿಕೆ ಇಲಾಖೆ ವತಿಯಿಂದ ಪರಿಹಾರವನ್ನು ನೀಡಲಾಗುವುದು ಎಂದರು.
ಜಿಪಂ ಸಿಇಒ ಗೋವಿಂದರಾಜು, ಜಿಪಂ ಉಪಾಧ್ಯಕ್ಷೆ ಮಮತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಗ್ರಪ್ಪ, ಜಗದೀಶ್ ಉಪಸ್ಥಿತರಿದ್ದರು.