ದೇಶದ ಜ್ವಲಂತ ಸಮಸ್ಯೆಗೆ ಗಾಂಧಿ ವಿಚಾರಧಾರೆಗಳಲ್ಲಿ ಪರಿಹಾರವಿದೆ
ಕಪ್ರ.ವಾರ್ತೆ ತುಮಕೂರು ಜು.9
ದೇಶ ಇಂದು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳಿಗೆ ಗಾಂಧಿ ವಿಚಾರಧಾರೆಗಳಲ್ಲಿ ಪರಿಹಾವಿರದ್ದು, ಈ ನಿಟ್ಟಿನಲ್ಲಿ ಯುವಜನತೆ ಗಮನಹರಿಯುವಂತೆ ಮಾಡಬೇಕಾಗಿದೆ ಎಂದು ಸ್ವಾತಂತ್ರ ಹೋರಾಟಗಾರರು ಹಾಗೂ ಸರ್ವೋದಯ ಕಾರ್ಯಕರ್ತ ಹೆಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದ ಗಂಗಾಧರಯ್ಯ ಅರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಸರ್ವೋದಯ ಗಾಂಧಿ ಆಧ್ಯಯನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ,ಅಧಿಕಾರಶಾಹಿ ದಬ್ಬಾಳಿಕೆ ಹಾಗೂ ಉಳ್ಳವರ ಮತ್ತು ಇಲ್ಲದವರ ನಡುವಿನ ಕಂದಕವನ್ನು ಕಡಿಮೆ ಮಾಡಲು ಗಾಂಧಿ ತತ್ವಗಳು ಸಹಾಯಕವಾಗಲಿವೆ ಎಂದರು.
ಇಂದು ಭಾರತದಲ್ಲಿ ಗಾಂಧಿಯನ್ನು ಮರೆಸುವ ಕೆಲಸ ನಡೆಯುತ್ತಿದೆ.ಆದರೆ ವಿದೇಶಿಯರು ಗಾಂಧೀಜಿಯ ತತ್ವಗಳನ್ನು ಒಪ್ಪಿಕೊಂಡು ಸರ್ವೋದಯ ವಿಚಾರಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿಗೆ ವಿಶ್ವ ಮನ್ನಣೆ ನೀಡಿದ್ದಾರೆ.ಇದು ಗಾಂಧೀಯನ್ನು ಮರೆಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದ ದೊರೆಸ್ವಾಮಿಗಳು,ಇಂದಿನ ಈ ಸಂಕಷ್ಟಗಳಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅದು ಗಾಂಧೀಜಿಯವರ ವಿಚಾರಧಾರೆಗಳು ಮಾತ್ರ ಎಂದು ಬಲವಾಗಿ ಪ್ರತಿಪಾದಿಸಿದರು.
ಇಂದಿನ ಅರ್ಥಿಕತೆ ಮೋಸಗಾರರನ್ನು ಸೃಷ್ಟಿಸುತ್ತಿದೆ. ದೇಶದ ಸಂಪತ್ತು ಎಲ್ಲರಿಗೂ ಎನ್ನುವ ಬದಲು ಕೆಲವರಿಗೆ ಮಾತ್ರ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬಡವರು ಮತ್ತು ಶ್ರೀ ಮಂತರ ನಡುವಿನ ಹೆಚ್ಚಾಗಿ,ದೇಶ ಅದೋಗತಿಯತ್ತ ಸಾಗುತ್ತಿದೆ. ಎಲ್ಲ ಜನರ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಅರ್ಥಿಕ ನೀತಿಗಳು ಬಂಡವಾಳಶಾಹಿಗಳ ಪರವಾದ ನಿಲುವುಗಳನ್ನು ಹೊಂದಿದೆ. ವಸ್ತು ವಿನಿಮಯಕ್ಕೆ ಬಳಕೆ ಮಾಡುತ್ತಿದ್ದ ಹಣ ಅತಿ ಹೆಚ್ಚು ಮಹತ್ವ ಪಡೆದು ಮನುಷ್ಯರನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡಿರುವ ಪರಿಣಾಮ ದೇಶದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕಾಗಿದೆ.ನಾವೆಲ್ಲರೂ ಎಚ್ಚೆತ್ತುಕೊಂಡು ಮುನ್ನಡೆದರೆ ಮಾತ್ರ ಇದರ ವಿಷ ವರ್ತುಲದಿಂದ ಹೊರಬರಲು ಸಾಧ್ಯ ಎಂದು ನುಡಿದರು.
ಭಾರತದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಇದುವರೆಗೂ ಜಾರಿಗೆ ತಂದಿರುವ 12 ಪಂಚ ವಾರ್ಷಿಕ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಒಟ್ಟಾರೆ ದೇಶದ ಬೆಳವಣಿಗೆಯ ಸೂಚ್ಯಾಂಕ ಹೆಚ್ಚಳವಾಗುತ್ತಿದ್ದರೂ ಬಡವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಶೇ 30 ರಷ್ಟು ಮಂದಿ ಬಡತನ ರೇಖೆಯಿಂದ ಕೆಳಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಬಡತನ ನಿವಾರಣೆಗೆಂದೇ ಏಕೆ ಮುಂದಿನ ಎರಡು ಪಂಚವಾರ್ಷಿಕ ಯೋಜನೆಗಳನ್ನು ಮೀಸಲಿಡಬಾರದು ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ದೇಶದಲ್ಲಿ ಹಿರಿಯರೆನಿಸಿಕೊಂಡ ನ್ಯಾಯಮೂರ್ತಿಗಳು ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ವೇದಿಕೆಯಲ್ಲಿದ್ದ ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಡಾ.ಎಂ.ಎನ್. ವೆಂಕಟಾಲಯ್ಯ,ಮಾಜಿ ಲೋಕಾಯುಕ್ತ ನ್ಯಾ.ಎನ್. ವೆಂಕಟಾಚಲ ಅವರನ್ನು ಕೋರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಸವಯ್ಯ , ಗಾಂಧೀಯ ಸರ್ವೋದಯ ಪರಿಕಲ್ಪನೆ ಇಂದು ಇಲ್ಲವಾಗಿದೆ. ಸರಿಯಾಗಿ ಅರ್ಥ ಮಾಡಿಕೊಳ್ಳದೇ ದಿನದಿಂದ ದಿನಕ್ಕೆ ಗಾಂಧಿಯಿಂದ ದೂರವಾಗುತ್ತಿದ್ದೇವೆ. ಯುವಜನಾಂಗಕ್ಕೆ ಸರ್ವೋದಯ ಪರಿಕಲ್ಪನೆಯನ್ನು ಮೂಡಿಸುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಗಾಂಧೀ ಸರ್ವೋದಯ ಅಧ್ಯಯನ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸುಪ್ರಿಂಕೋರ್ಟಿನ ನಿವೃತ್ತ ನ್ಯಾ.ಎಂ.ಎನ್. ವೆಂಕಟಾಚಲಯ್ಯ, ನಿವೃತ್ತ ಲೋಕಾಯುಕ್ತ ಎನ್. ವೆಂಕಟಾಚಲ,ಖ್ಯಾತ ವಿಮರ್ಶಕ ಡಾ.ರಾಮಚಂದ್ರನ್ ಮತ್ತಿತರರು ವೇದಿಕೆಯಲ್ಲಿದ್ದರು.