ಕೆರೆ ಅಭಿವೃದ್ಧಿಗೆ ಒಕ್ಕೊರಲ ಆಗ್ರಹ
ಪಾವಗಡ: ಉದ್ಯೋಗ ಸೃಷ್ಟಿ ಸೇರಿದಂತೆ ಗ್ರಾಮೀಣ ಕೆರೆಗಳ ಅಭಿವೃದ್ಧಿಗೆ ಮಹತ್ತರವಾದ ಜಲಸಂವರ್ಧನೆ ಯೋಜನೆ ರಾಜ್ಯದಲ್ಲಿ ಮತ್ತೆ ಜಾರಿಗೆ ತರಲು ಗ್ರಾಮೀಣ ಪ್ರದೇಶಗಳ ಕೂಲಿ ಕಾರ್ಮಿಕರು ಒತ್ತಾಯಿಸಿದ್ದಾರೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಅವಧಿಯಲ್ಲಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ ರಾಜ್ಯದಲ್ಲಿ ಜಾರಿಗೆ ತಂದು ಕೆರೆ ಅಭಿವೃದ್ಧಿ ನಿರ್ವಹಣೆಯನ್ನು ನೋಂದಣಿ ಪಡೆದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲಾಗಿತ್ತು. ಗ್ರಾಮೀಣಾ ಜನತೆಯ ಮಹತ್ತರವಾದ ಜಲಸಂವರ್ಧನ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಅನುಷ್ಠಾನ ಮಾಡಿದರೆ ಕೆರೆಗಳ ಅಭಿವೃದ್ಧಿ ಸೇರಿದಂತೆ ಆನೇಕ ನಿರುದ್ಯೋಗಿಗಳಿಗೆ ಕೆಲಸ ದೊರೆಯುವುವಂತಾಗುತ್ತದೆ. ತಾಲೂಕಿನದ್ಯಂತ ಸುಮಾರು 180 ಕೆರೆಗಳಿದ್ದು ಇದರಲ್ಲಿ ಸುಮಾರು ಒಂದು ನೂರು ಕೆರೆಗಳು ಅಭಿವೃದ್ಧಿ ಪಡಿಸಲಾಗಿದೆ. 5 ವರ್ಷದಲ್ಲಿ ಈ ಯೋಜನೆ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಸಹಕಾರಿಯಾಗಿದ್ದು ಅಭಿವೃದ್ಧಿ ಉದ್ಯೋಗ ಸೃಷ್ಟಿಯ ಹಿನ್ನೆಲೆಯಲ್ಲಿ ಜಲಸಂವರ್ಧನ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
'ಹಲೋ ಗ್ರಾಮ
ಸಹಾಯಕ'
ತಿಪಟೂರು: ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕ ಒಕ್ಕೂಟದ ವತಿಯಿಂದ ಹಲೋ ಗ್ರಾಮ ಸಹಾಯಕ ಛಲೋ ಬೆಂಗಳೂರು ಎಂಬ ಕಾರ್ಯಕ್ರಮವನ್ನು ಜು.15ರ ಸೋಮವಾರದಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕ ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಗ್ರಾಮ ಸಹಾಯಕರ ಹುದ್ದೆಯನ್ನು ಡಿ ದರ್ಜೆ ಎಂದು ಪರಿಗಣಿಸಿ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕ ಒಕ್ಕೂಟವು ತಿಳಿಸಿದೆ.
ಮಾಹಿತಿಗೆ ಸೂಚನೆ
ತಿಪಟೂರು: ಕೊರೆದು ಮುಚ್ಚದೆ ಬಿಟ್ಟಿರುವ ಅನುಪಯುಕ್ತ ಕೊಳವೆಬಾವಿ ಮತ್ತು ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ತಿಳಿಸಬೇಕೆಂದು ಉಪವಿಭಾಗಾಧಿಕಾರಿ ಎಂ.ಶಿಲ್ಪ ತಿಳಿಸಿದ್ದಾರೆ. ತಿಪಟೂರು ಉಪವಿಭಾಗದ ಗ್ರಾಮ ಅಥವಾ ಜಮೀನು, ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳು ಕಂಡುಬಂದಲ್ಲಿ ಮಾಹಿತಿಯನ್ನು ಕೂಡಲೆ ತಿಳಿಸಬೇಕೆಂದು ಉಪವಿಭಾಗಾಧಿಕಾರಿ ಎಂ.ಶಿಲ್ಪ ಸೂಚಿಸಿದ್ದಾರೆ. ಇಲ್ಲವೆ ದೂ. 08134-251085 ಸಂಪರ್ಕಿಸಬಹುದು.