ದೇಶದ ಏಳಿಗೆಗೆ ಶಿಕ್ಷಣ ಅಡಿಗಲ್ಲು
ಕ,ಪ್ರ,ವಾರ್ತೆ ಮಧುಗಿರಿ ಜು 12 : ದೇಶದ ಏಳಿಗೆಗೆ ಶಿಕ್ಷಣ ಅಡಿಗಲ್ಲು, ಪ್ರತಿಯೊಬ್ಬ ವಿದ್ಯಾರ್ಥಿ ಆತ್ಮವಿಶ್ವಾಸದಿಂದ ಮುತುವರ್ಜಿ ವಹಿಸಿ ಶಿಕ್ಷಣ ಕಲಿತಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಕೊರಟಗೆರೆ ಶಾಸಕ ಸುಧಾಕರ್ಲಾಲ್ ತಿಳಿಸಿದರು.
ಮಧುಗಿರಿ ತಾಲೂಕಿನ ಬ್ಯಾಲ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಟಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯಕ್ತಿ ಮತ್ತು ದೇಶದ ಏಳಿಗೆಗೆ ಸಹಕಾರಿ,ಪ್ರತಿಯೊಬ್ಬ ವಿದ್ಯಾರ್ಥಿ ಕಷ್ಟ ಪಟ್ಟು ಓದಿ ತಾನೂ ಕೂಡ ಎಲ್ಲರಂತೆ ಪ್ರಶಸ್ತಿ ಪಡೆಯಬೇಕು ಎಂಬ ಹಂಬಲ ಬರಬೇಕು. ವಿದ್ಯಾರ್ಥಿ ಜೀವನ ತುಂಬಾ ಸುಂದರವಾದುದು. ಆ ಸುಂದರ ಸಮಯವನ್ನು ತಮ್ಮ ಏಳಿಗೆಗೆ ಮತ್ತು ದೇಶದ ಪ್ರಗತಿಗೆ ಶ್ರಮಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್ ವಿದ್ಯೆ ಸಾಧಕನ ಸ್ವತ್ತೆ ವಿನಹ ಸೋಮಾರಿಯ ಸ್ವತ್ತಲ್ಲ. ಹಣ, ಆಸ್ತಿ ಇದ್ದರೆ ಕಳ್ಳಕಾಕರ ಕಾಟ ಹೆಚ್ಚು. ಆದರೆ, ವಿದ್ಯೆಯನ್ನು ಯಾರು ಕದಿಯಲಾರರು ಹಾಗಾಗಿ ಮಕ್ಕಳು ಜ್ಞಾನ ಸಂಪಾದನೆಗೆ ಅಧಿಕ ಒತ್ತು ನೀಡುವಂತೆ ಸಲಹೆ ಮಾಡಿದರು.
ದೇಶದ ಭವಿಷ್ಯ: ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಪ್ರತಿಯಾಬ್ಬ ಮಕ್ಕಳು ಜ್ಞಾನಾರ್ಜನೆ ಪಡೆಯಲು ಸತತ ಪರಿಶ್ರಮ, ದೇಹ ಮತ್ತು ಮನಸ್ಸು ದಂಡಿಸಬೇಕು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲೆ ಅಡಗಿದೆ ಎಂದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ತಪ್ಪು ಹೆಜ್ಜೆ ಇಡದಂತೆ ಪೋಷಕರು ಎಚ್ಚರ ವಹಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ತಗ್ಗಿಹಳ್ಳಿ ಶೀರಾಮಕೃಷ್ಣ ಆಶ್ರಮದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಕ್ಕಳಿಗೆ ಹಿತವಚನ ಹೇಳಿದರು. ಕಾಲೇಜು ಪ್ರಾಂಶುಪಾಲ ಕೊಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಎಚ್.ಸಿ.ಭೈರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಗಜಾನನ ಪ್ರಾರ್ಥಿಸಿದರು. ಪಿ.ಎಸ್.ಅರುಣ ಸ್ವಾಗತಿಸಿ ಬಿ.ಎಲ್.ಸ್ವಾಮಿ ನಿರೂಪಿಸಿ ವಂದಿಸಿದರು.