ಪರಿಸರ ಸ್ವಚ್ಛತೆ ಅರಿವಿಗೆ ಕರಪತ್ರ
ತುಮಕೂರು: ನಗರದ ಹೊರಪೇಟೆಯ ಶ್ರೀರಾಮ ಕನ್ನಡ ಯುವಕ ಸಂಘದ ಆಶ್ರಯದಲ್ಲಿ ಚಿಕೂನ್ ಗುನ್ಯಾ, ಡೆಂಘೀ, ಮಲೇರಿಯಾ ರೋಗಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕರಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೋಗಗಳ ನಿಯಂತ್ರಣ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಕುರಿತು ಮಾಹಿತಿ ಒಳಗೊಂಡ ಕರಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಿಸಲಾಯಿತು. 19ನೇ ವಾರ್ಡ್ ನಗರಸಭಾ ಸದಸ್ಯ ಟಿ.ಎಚ್. ಬಾಲಕೃಷ್ಣ ಅವರ ನೇತೃತ್ವದಲ್ಲಿ ಯುವಕ ಸಂಘದ ಪದಾಧಿಕಾರಿಗಳ ಕರಪತ್ರ ಹಂಚಿದರು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಸ್ವಚ್ಛತಾ ಕ್ರಮ ಕೈಗೊಳ್ಳುವುದು. ಜತೆಗೆ ಕಾಯಿಲೆ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದೂ ಸೇರಿದಂತೆ ಪೂರಕ ಮಾಹಿತಿ ಒಳಗೊಂಡಿರುವ ಕರಪತ್ರ ಹಂಚಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಶ್ರೀ ರಾಮ ಕನ್ನಡ ಯುವಕ ಸಂಘ, ಸರ್ವೋದಯ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಹೇಳಿದರು.