ಲೇಸನ್ನೇ ಬಯಸುವುದೇ ವೀರಶೈವ ಧರ್ಮ
ಶಿರಾ: ವೀರಶೈವ ಧರ್ಮವು ಸನಾತನ ಧರ್ಮವಾಗಿದ್ದು ಭೂಮಿಯ ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ವಿಶಾಲ ಧ್ಯೇಯ ಧೋರಣೆಗಳನ್ನು ಹೊಂದಿರುವ ಧರ್ಮವಾಗಿದೆ ಎಂದು ಕೊಣಂದೂರು ಶ್ರೀ ಶಿವಲಿಂಗೇಶ್ವರ ಬೃಹನ್ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ವೀರಶೈವ ಭಕ್ತರ ಮನೆಗಳಲ್ಲಿ ಹಮ್ಮಿಕೊಂಡಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆಯಲ್ಲಿ ಮತ್ತು ಮನೆಯಿಂದ ಮನೆಗೆ ಸನಾತನ ವೀರಶೈವ ಧರ್ಮ ಪ್ರಚಾಯ ಯಾತ್ರೆ ನಿಮಿತ್ತ ಪಟ್ಟಣದಲ್ಲ್ಲಿ ಇಷ್ಟಲಿಂಗ ಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಆರ್ಶೀವಚನ ನೀಡುತ್ತಿದ್ದರು.
ವೀರಶೈವ ಧರ್ಮದ ಇತಿಹಾಸ ಬಹು ಪ್ರಾಚೀನ. ಶಿವನ ಸದ್ದೋಜಾತಾ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ ಪಂಚಮುಖಗಳಿಂದ ಆವಿರ್ಭವಿಸಿದ ಪಂಚಾಚಾರ್ಯರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. ವೀರಶೈವ ಧರ್ಮವು ಅಂತರಂಗ-ಬಹಿರಂಗ ಶುದ್ಧಿಯ ಆದ್ಯತೆಯ ಜೊತೆಗೆ ವಿದ್ಯಾ, ವಿನಯ, ವಿವೇಚನೆಗಳ ತವರು ಮನೆಯಾಗಿದೆ. ಕಾಯಕ ಮತ್ತು ದಾಸೋಹಕ್ಕೆ ಅಪೂರ್ವ ಸ್ಥಾನ ಕಲ್ಪಿಸಿ ಧರ್ಮವನ್ನು ಜ್ಯೋತಿಯಾಗಿ ಮತ್ತು ನೆಲ ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿರುವ ಈ ಧರ್ಮದಲ್ಲಿ ಮಾನವ ಧರ್ಮವೇ ಉಸಿರಾಗಿದ್ದು ಧರ್ಮಾಚರಣೆಯಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಿ ಸಕಲ ಜೀವಾತ್ಮರಿಗೆ ಒಳಿತಾಗುವುದು. ಧರ್ಮಾಚರಣೆಯಿಂದ ಮನಸ್ಸು ಮೃದುವಾಗಿ ಹೃದಯ ಅರಳುವುದು ಎಂಬ ದಿವ್ಯ ಸಂದೇಶದ ಕೀರ್ತಿಯೂ ಈ ನಮ್ಮ ಧರ್ಮಕ್ಕಿದೆ ಎಂದು ಹೇಳಿದರು.
ಭಾವೈಕ್ಯತೆಯ ಬೆಸುಗೆ: ವೀರಶೈವ ಧರ್ಮದ ಇತಿಹಾಸದಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯ ನೆನಹು ಅಜರಾಮರ, ಜಗತ್ತಿಗೆ ಆದರ್ಶವಾದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಯಸ್ಸು ಹಾಗೂ ಜಾತಿ ಮತ ಪಂಥಗಳ ಗಡಿಮೀರಿ ಭಾವೈಕ್ಯತೆಯ ಬೆಸುಗೆಯನ್ನು ಉಂಟು ಮಾಡಿದ ಕೀರ್ತಿ ಇವರದು.
ಇಂತಹ ಮಹಾನ್ ಸತ್ಪುರುಷರು ನೆಲೆ ನಿಂತ ಧರ್ಮ ಕೇಂದ್ರಗಳೇ ಪಂಚಪೀಠಗಳು ಹಾಗೂ ಶಿವಾಧ್ವೈತ ಸಿದ್ಧಾಂತ ತಾಣಗಳು. ಇಂತಹ ಧರ್ಮದಲ್ಲಿ ಇಷ್ಟಲಿಂಗ ಪೂಜೆಗೆ ಅತ್ಯಂತ ಪವಿತ್ರ ಸ್ಥಾವನ್ನು ನೀಡಿದ್ದು ಪ್ರತಿಯೊಬ್ಬ ವೀರಶೈವರು ಯಾವಾಗಲೂ ಇಷ್ಟಲಿಂಗಧಾರಿಗಳಾಗಿರಬೇಕು ಮತ್ತು ತಪ್ಪದೇ ಇಷ್ಟಲಿಂಗ ಪೂಜೆ ಮಾಡಬೇಕು ಎಂದು ಕರೆ ನೀಡಿದರು.
ಮುಖಂಡರಾದ ಡಿ.ಸಿ.ನಾಗಭೂಷಣ್, ಎಸ್.ಎನ್. ಚಿನ್ನಪ್ಪ, ಎಸ್.ಎಂ.ಹರೀಶ್, ಹೊಸಕೆರೆ ಮಹೇಶ್, ಹನುಮಂತರಾಜು, ರಘು ಹಲವಾರು ಭಕ್ತರು ಹಾಜರಿದ್ದರು.