ಸಮಾಜದ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ತರ
ಕ.ಪ್ರ. ವಾರ್ತೆ ತುರುವೇಕೆರೆ ಜು.13
ಸಮಾಜದಲ್ಲಿನ ಹಲವಾರು ನ್ಯೂನತೆಗಳನ್ನು ಹೊಡೆದೋಡಿಸಿ ಸುಧಾರಣೆಯನ್ನು ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದು ಪತ್ರಕರ್ತ ಹಾಗೂ ಸಾಹಿತಿ ಉಗಮ್ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ತಾಲೂಕು ಪತ್ರಕರ್ತರ ಸಂಘ ಹಾಗೂ ವಿವೇಕಾನಂದ ಕಾಲೇಜಿನ ವತಿಯಿಂದ ನಡೆದ ಕಾರ್ಯನಿರತ ಪತ್ರಕರ್ತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂತ್ರಜ್ಞಾನ ಬದಲಾದಂತೆ ಪತ್ರಕರ್ತರೂ ಸಹ ತಮ್ಮ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜದಲ್ಲಿರುವ ಭ್ರಷ್ಟ ವ್ಯಸ್ಥೆಯ ವಿರುದ್ಧ ಜನಜಾಗೃತಿಗೊಳಿಸಬೇಕು ಎಂದರು.
ಪತ್ರಕರ್ತ ವಿನಯ್ ಭಟ್ ಮಾತನಾಡಿ ಪತ್ರಕರ್ತ ಕೇವಲ ವರದಿಯನ್ನು ಸಂಗ್ರಹಿಸಿ ಪ್ರಕಟಿಸುವುದಕ್ಕೆ ಮಾತ್ರವೇ ಸೀಮಿತವಾಗಬಾರದು. ಮಾನವೀಯ ಮೌಲ್ಯಗಳನ್ನು ಹೊತ್ತ ವರದಿಗೂ ಮಾನ್ಯತೆ ನೀಡಬೇಕು ಎಂದರು. ತಾಲೂಕು ಸಂಘದ ಅಧ್ಯಕ್ಷ ತುರುವೇಕೆರೆ ಪ್ರಸಾದ್ ಮಾತನಾಡಿ ವಸ್ತು ನಿಷ್ಠ ವರದಿಗಳನ್ನು ಪ್ರಕಟಿಸಲು ವರದಿಗಾರರು ಹಿಂಜರಿಯಬಾರದು ಎಂದು ಹೇಳಿದರು. ವರದಾನ್ ಕೃಷಿ ಪತ್ರಿಕೆಯನ್ನು ತಾಲೂಕು ಕಸಾಪ ಅಧ್ಯಕ್ಷ ದೇವರಾಜು ಬಿಡುಗಡೆ ಮಾಡಿದರು. ಎಂ.ಡಿ.ಶಿವನಂಜಪ್ಪ, ದೇವರಾಜು, ಉಗಮ್ ಶ್ರೀನಿವಾಸ್, ವಿನಯ್ ಭಟ್ರನ್ನು ಗೌರವಿಸಲಾಯಿತು. ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಸಮಾರಂಭ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದರು. ಪತ್ರಕರ್ತರಾದ ಟಿ.ವಿ.ಶ್ರೀಧರಮೂರ್ತಿ, ಗೂರಲಮಠ ರಾಮಪ್ರಸಾದ್, ಭೈರೇಶ್ ಮೊದಲಾದವರು ಉಪಸ್ಥಿತರಿದ್ದರು. ಆರ್. ಸತ್ಯನಾರಾಯಣ್ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಯಸಂದ್ರ ಸ್ವಾಮಿ ನಿರೂಪಿಸಿದರು. ಧರಣೀಶ್ ಸ್ವಾಗತಿಸಿದರು. ದುಂಡ ಮಲ್ಲಿಕಾರ್ಜುನ್ ವಂದಿಸಿದರು.