ಇಂಧನ ಸ್ವಾವಲಂಬನೆಗೆ ದೇಶದ ದಾಪುಗಾಲು
ಕನ್ನಡಪ್ರಭ ವಾರ್ತೆ ತುಮಕೂರು ಜು.13
ಇಂಧನ ಸ್ವಾವಲಂಬನೆ ರಾಷ್ಟ್ರವಾಗುವ ನಿಟ್ಟಿನಲ್ಲಿ ದೇಶ ದಾಪುಗಾಲು ಇಟ್ಟಿದ್ದು 2030 ರ ವೇಳೆಗೆ ಇಂಧನ ಸ್ವಾವಲಂಬಿ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸುಳಿವನ್ನು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ನೀಡಿದರು.
ತುಮಕೂರು ಬಳಿಯ ಬೆಳಗುಂಬ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಲ್ಲಿ ನಿರ್ಮಿಸಿರುವ ಶ್ರವಣದೋಷ ಮಕ್ಕಳ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿ ಕೇಂದ್ರ ಮಾತನಾಡಿದರು.
ಇಂಧನ ಸ್ವಾವಲಂಬನೆ ರಾಷ್ಟ್ರ ನಿರ್ಮಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂಬ ಸುಳಿವನ್ನು ಮೊಯ್ಲಿ ನೀಡಿದರು.
2020 ರ ವೇಳೆಗೆ 30 ರಿಂದ ಶೇ. 50 ರಷ್ಟು ಇಂಧನ ಸ್ವಾವಲಂಬಿ ರಾಷ್ಟ್ರವಾಗಲಿದೆ. 2030 ರ ವೇಳೆಗೆ ಸಂಪೂರ್ಣ ಇಂಧನ ಸ್ವಾವಲಂಬಿ ರಾಷ್ಟ್ರವಾಗಲಿದೆ ಎಂದ ಅವರು ಹಾಲಿ ಶೇ. 80 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ನಮ್ಮಲ್ಲಿ ಪ್ರೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮನೋನ್ವೇಷಣೆ ಆಗದ ಹೊರತು ಈ ವಲಯದಲ್ಲಿ ಸಾಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
26 ಕ್ಕೆ ಸಿಎಂ ಭೇಟಿ: ಕರ್ನಾಟಕದ 10 ಜಿಲ್ಲೆಯಿಂದ 700 ಕಿ.ಮೀ. ಹಾದುಹೋಗಿರುವ ಪೈಪ್‌ಲೈನ್ ಉದ್ದಕ್ಕು ಅಗತ್ಯವಿರುವೆಡೆ ಸಿಎನ್‌ಜಿ ಘಟಕ ತೆರೆಯುವ ಕುರಿತು ಇದೇ ತಿಂಗಳ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಲಾಗುವುದು ಎಂದರು.
ಅಲ್ಲದೇ ಪೈಪ್ ಲೈನ್ ಉದ್ದಕ್ಕು ಗ್ರೀನ್ ಕಾರಿಡರ್ ನಿರ್ಮಿಸಲಾಗುವುದು ಎಂದರು.
ರಾಜ್ಯದಲ್ಲಿ ಸಿಎನ್‌ಜಿ ಬಳಸುವ ಆಟೋ ಚಾಲಕರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಅನಿಲ ಪೈಪ್‌ಲೈನ್ ಹಾದುಹೋಗಿರುವ ಜಿಲ್ಲೆಗಳಲ್ಲಿ ಅನಿಲ ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಆಸಕ್ತಿ ತೋರಿದಲ್ಲಿ ಸಹಕಾರ ನೀಡುವ ಭರವಸೆ ನೀಡಿದರು. 2017 ಕ್ಕೆ ಟುರ್ಕೆಮೆನಿಸ್ತಾನದಿಂದ ಅನಿಲವು ಪೈಪ್‌ಲೈನ್ ಮೂಲಕ ಭಾರತ ತಲುಪಲಿದೆ. 1700 ಕಿ.ಮೀ. ಉದ್ದದ ಈ ಪೈಪ್‌ಲೈನ್ ಪಾಕಿಸ್ತಾನದಲ್ಲಿ ಹಾದು ಭಾರತಕ್ಕೆ ಬಂದಿದೆ. ಹಾಗಾಗಿ, ಇದು ಬದಲಾವಣೆ ಯುಗ. ಈಗ 1-2 ವರ್ಷಗಳಲ್ಲೇ ಯುಗ ಪರಿವರ್ತನೆ ಆಗಲಿಕ್ಕೆ ಸಾಕು. ಅಂತಹ ಮನೋಭೂಮಿಕೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಮೊಯ್ಲಿ ಹೇಳಿದರು.
ಜಿಲ್ಲೆಯ ಶಿರಾ ಅಥವಾ ತುಮಕೂರಿನಲ್ಲಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಬರಪೀಡಿತ ಮಧ್ಯಕರ್ನಾಟಕ ಭಾಗದಲ್ಲಿ ಈ ಪೈಪ್‌ಲೈನ್ ಹಾದುಹೋಗಿದ್ದು ಇಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲು ಅನಿಲ ಆಧಾರಿತ ಕೈಗಾರಿಕೆ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದರು.
ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಡಾ.ಕೆ.ರಫೀಕ್ ಅಹ್ಮದ್, ಡಾ.ಎಂ.ಆರ್. ಹುಲಿನಾಯ್ಕರ್, ಬೆಳಗುಂಬ ಗ್ರಾಪಂ ಅಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ಕೆಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಸೋಮಶೇಖರ್, ಗೇಲ್ ಇಂಡಿಯಾ ಅಧ್ಯಕ್ಷ ಬಿ.ಸಿ.ತ್ರಿಪಾಠಿ ಉಪಸ್ಥಿತರಿದ್ದರು.
ಇಂಗ್ಲಿಷ್ ಡಿಸಿ
ತುಮಕೂರು: ಇಂಗ್ಲಿಷ್‌ನಲ್ಲಿ ಮಾತನಾಡುವ ಮೂಲಕ ತಾವೊಬ್ಬ ಇಂಗ್ಲಿಷ್ ಡಿಸಿ ಎಂಬುದನ್ನು ತುಮಕೂರಿನ ನೂತನ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸಾಬೀತು ಪಡಿಸಿದರು.
ಕಾರ್ಯಕ್ರಮದಲ್ಲಿ ಅಪ್ಪಿ ತಪ್ಪಿಯೂ ಜಿಲ್ಲಾಧಿಕಾರಿಗಳು ಕನ್ನಡ ಭಾಷೆ ಬಳಸಲಿಲ್ಲ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಅಧ್ಯಕ್ಷರೂ ಅಗಿರುವ ಜಿಲ್ಲಾಧಿಕಾರಿಗಳು ಆಹ್ವಾನ ಪತ್ರಿಕೆಯಲ್ಲಿದ್ದರೆಲ್ಲವರನ್ನೂ ಇಂಗ್ಲಿಷ್‌ನಲ್ಲೇ ಸ್ವಾಗತಿಸಿ, ಪಾವನರಾದರು. ಮಿಕ್ಕಂತೆ ಕಾರ್ಯಕ್ರಮ ಸಂಪೂರ್ಣವಾಗಿ ಕನ್ನಡದಲ್ಲೇ ನಡೆದಿದ್ದು ವಿಶೇಷವಾಗಿತ್ತು.
ಶಿಷ್ಟಾಚಾರಉಲ್ಲಂಘನೆ
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಮಾತನಾಡಿದ್ದು ಕೊನೆಗೆ. ರೆಡ್‌ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಗೆ ಸನ್ಮಾನ ಮಾಡುವುದೇ ಮುಖ್ಯವಾಗಿ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗಿಂತ ಮುಂಚೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ಕಾರ್ಯಕ್ರಮ ಪಟ್ಟಿ ಉಲ್ಟಾ ಆಗಿ, ಶಿಷ್ಟಾಚಾರ ಉಲ್ಲಂಘನೆಯಾಯಿತು. ವಂದನಾರ್ಪನೆ ಕೂಡ 20 ನಿಮಿಷಕ್ಕೂ ಹೆಚ್ಚು ಕಾಲ ನಡೆದಿದ್ದು ವಿಶೇಷವಾಗಿತ್ತು.
ಮೊಯ್ಲಿ ಭರವಸೆ
ತುಮಕೂರು: ತುಮಕೂರಿನ ಪತ್ರಿಕಾ ಭವನಕ್ಕೆ ಬೇಕಾಗಿರುವ ವಾಚನಾಲಯ ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಸೂಚಿಸಿದರು. ಪತ್ರಕರ್ತರಿಗೆ ವೇತನ ಮಂಡಳಿ ಹಾಗೂ ಸ್ಥಾಪನೆ ಹಾಗೂ ಯಶಸ್ವಿನಿ ಯೋಜನೆಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.