ಸುದ್ದಿ ಸಂಕ್ಷೇಪ
ರಂಜಾನ್ ಪ್ರಯುಕ್ತ ಹಣ್ಣು ವಿತರಣೆ
ತುಮಕೂರು: ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.ಸೂಫಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಡಾ. ಇಂತಿಯಾಜ್ ಅಹಮದ್, ಬಿಜೆಪಿ ಮುಖಂಡ ಶಬ್ಬೀರ್ ಅಹಮದ್ ನೇತೃತ್ವ ವಹಿಸಿದ್ದರು. ರಂಜಾನ್ ಹಬ್ಬದ ಆರಂಭದ ದಿನದಂದು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿ ಹಬ್ಬವನ್ನು ಆಚರಿಸಿದರು. ಈ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಎಂ. ರಜನಿ, ರಂಗಸ್ವಾಮಿ ನಾಯಕ್, ಶಿವಪುತ್ರ ಮುಂತಾದವರು ಇದ್ದರು.
ಉಚಿತ ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ
ತಿಪಟೂರು: ಕ್ವಾಲಿಟಿ (ಸಿ.ಇ.ಟಿ.ಎಸ್.) ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ಬ್ಯೂಟಿಷಿಯನ್ ಗ್ಲಾಸ್ ಪೇಂಟಿಂಗ್, ಮೆಹಂದಿ ಹ್ಯಾಂಡ್ ಎಂಬ್ರಾಯಿಡಿಂಗ್ ಮುಂತಾದ ತರಗತಿಗಳನ್ನು ಆಯೋಜಿಸಿದ್ದು, 15ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಮುಗಿದ ನಂತರ ಉಚಿತ ಹೊಲಿಗೆ ಯಂತ್ರ ನೀಡಲಾಗುವುದು. ಆಸಕ್ತರು ಕ್ವಾಲಿಟ್ ಸಂಸ್ಥೆ ಮೊದಲನೆ ಮಹಡಿ ಮಕ್ಕಾನ್ ಲೈನ್ ಎಸ್.ಬಿ.ಎಂ. ಬ್ಯಾಂಕ್ ಎದುರು, ರೇಲ್ವೆ ಸ್ಟೇಷನ್ ರಸ್ತೆ, ತಿಪಟೂರು ಮತ್ತು ಬ್ಯೂಟಿಷಿಯನ್ ಮತ್ತು ಟೈಲರಿಂಗ್ ವೃತ್ತಿಪರ ತರಬೇತಿಗಳ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 8710076697, 8910019487 ಸಂಪರ್ಕಿಸಬಹುದು.
ನಿಧನ
ಹೊನ್ನಪ್ಪ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನ ಕಾರ್ಯದರ್ಶಿಯಾಗಿದ್ದ ಹೊನ್ನಪ್ಪ (50) ಗುರುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊನ್ನಪ್ಪನವರು ಹಾಲಿ ಸಾರ್ಥವಳ್ಳಿ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 15ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ನಿನ್ನೆ ರಾತ್ರಿ ಅಲ್ಲಿಯೇ ಸಾವನ್ನಪ್ಪಿದ್ದಾರೆ.ಇವರು ತಾಲ್ಲೂಕಿನ ಆದಿನಾಯಕನಹಳ್ಳಿ ಗ್ರಾಮದ ಕೆಂಪಮ್ಮ ದೇವಸ್ಥಾನದ ಧರ್ಮದರ್ಶಿಯಾಗಿ, ತಾ.ಪಂ ಮಾಜಿ ಸದಸ್ಯರಾಗಿ, ಮಣಕಿಕೆರೆ ಗ್ರಾ.ಪಂ.ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಶಾಸಕ ಕೆ.ಷಡಕ್ಷರಿ, ಕೆಜೆಪಿ ಮುಖಂಡ ಲೋಕೇಶ್ವರ, ತರಕಾರಿ ನಾಗರಾಜು, ತಾ.ಕಾಂಗ್ರೆಸ್ ಅಧ್ಯಕ್ಷ ಬಿ.ಪರಮಶಿವಯ್ಯ, ಜೆಡಿಎಸ್ ತಾ.ಅಧ್ಯಕ್ಷ ಗುರುಮೂರ್ತಿ, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ರೇಣುಕಾರ್ಯ, ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ರಾಜ್ಯ ಮಹಿಳಾ ಜೆಡಿಎಸ್ ಕಾರ್ಯದರ್ಶಿ ರೇಖಾ ಅನೂಪ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಂ.ಆರ್. ಸಂಗಮೇಶ್, ಎಚ್.ಬಿ.ದಿವಾಕರ್, ಚಿಕ್ಕಣ ಸಂತಾಪ ಸೂಚಿಸಿದ್ದಾರೆ.