ಕಾನೂನು ಬಗ್ಗೆ ಮಕ್ಕಳಿಗೆ ಅರಿವು ಅಗತ್ಯ
ಕ.ಪ್ರ. ವಾರ್ತೆ ತಿಪಟೂರು ಜು.14
ತಾಲೂಕಿನ ನೊಣವಿನಕೆರೆ ಪೊಲೀಸ್ ಠಾಣಾ ಸಿಬ್ಬಂದಿಯ ಸಹಕಾರದೊಂದಿಗೆ ಜನಸ್ನೇಹಿ ಪೊಲೀಸರ ಬಗ್ಗೆ ಶಾಲಾ ಮಕ್ಕಳಿಗೆ ತಿಳಿವಳಿಕೆ ನೀಡುವ ಅರಿವು ಕಾರ್ಯಕ್ರಮಕ್ಕೆ ನೊಣವಿನಕೆರೆ ಪೋಲಿಸ್ ಠಾಣೆಯಲ್ಲಿ ಪರಿಸರ ಪ್ರೇಮಿ ಗುಂಗರಮೆಳೆ ಮುರಳೀಧರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮುರಳೀಧರ್ ಮಕ್ಕಳಲ್ಲಿ ಪೋಲಿಸರ ಬಗ್ಗೆ ಇರುವ ಅಪನಂಬಿಕೆಗಳನ್ನು ಪರಿಹರಿಸಲು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ ಎಂದು ತಿಳಿಸಿ, ಪ್ರತಿ ಗುರುವಾರ ನೊಣವಿನಕೆರೆ ಪೊಲೀಸ್ ಠಾಣೆಗೆ ಒಂದೊಂದು ಶಾಲೆ ಮಕ್ಕಳು ಬಂದು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಬ್ ಇನ್ಸ್‌ಪೆಕ್ಟರ್ ಸುರೇಶ್‌ರಾಜ್ ಮಕ್ಕಳ ಮನಸ್ಸಿನಲ್ಲಿದ್ದ ಹಲವಾರು ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಅರ್ಥವಾಗುವಂತೆ ತಿಳಿಸಿ, ಪ್ರತಿ ಗುರುವಾರದಂದು ಯಾವುದೇ ಶಾಲೆಯ ಮಕ್ಕಳು ಬಂದರು ಜನಸ್ನೇಹಿ ಪೊಲೀಸರು ಹಾಗೂ ಇಲಾಖೆಯ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದರು.
ಜೆ.ಪಿ. ಪ್ರೌಢಶಾಲೆಯ 35 ಮಕ್ಕಳು ಸೇರಿದಂತೆ ಶಿಕ್ಷಕ ಶಂಕರಪ್ಪ ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.